Belagavi | ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದ ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ | PC : Gemini AI
ಬೆಳಗಾವಿ : ನಕಲಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದ ನಾಲ್ವರಿಗೆ ಬೆಳಗಾವಿಯ ಎರಡನೇ ಜೆಎಂಎಫ್ಸಿ ನ್ಯಾಯಾಲಯ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 19 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಶಿಕ್ಷೆಗೆ ಗುರಿಯಾದವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅನೆಹಳ್ಳಿ ಗ್ರಾಮದ ರಾಜು ವೆಂಕಟೇಶಪ್ಪ ಟಿ., ಕುನ್ನಿಬಂಡಿ ಗ್ರಾಮದ ಮೋಹನ್ಕುಮಾರ್ ಚಂದ್ರಪ್ಪ, ಮದ್ದೇರಿ ಗ್ರಾಮದ ಮಂಜುನಾಥ ಬೈಚಪ್ಪ ಹಾಗೂ ಅನೆಹಳ್ಳಿ ಗ್ರಾಮದ ಬಾಲಕೃಷ್ಣ ವೆಂಕಟಪ್ಪ.
2012ರ ಸೆಪ್ಟಂಬರ್ 6ರಂದು ಬೆಳಗಾವಿ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದರು. ಈ ವೇಳೆ ಆರೋಪಿಗಳು ಬೆಂಗಳೂರಿನ ಅಪರಿಚಿತ ವ್ಯಕ್ತಿಯೊಬ್ಬರಿಂದ ನಕಲಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಪಡೆದು, ಅವುಗಳಲ್ಲಿ ಹೆಚ್ಚಿನ ಅಂಕಗಳನ್ನು ತೋರಿಸಿ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದು ಗ್ರಾಮ ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದರು ಎಂದು ತನಿಖೆಯಲ್ಲಿ ಬಹಿರಂಗಗೊಂಡಿತ್ತು.
ನೇಮಕಾತಿಯ ಬಳಿಕ ದಾಖಲೆಗಳ ಪರಿಶೀಲನೆ ವೇಳೆ ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿಯಾಗಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳು ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿ ಸರಕಾರಿ ಉದ್ಯೋಗ ಪಡೆದಿರುವುದನ್ನು ದೃಢಪಡಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜೆಎಂಎಫ್ಸಿ ನ್ಯಾಯಾಲಯ, ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನಾಲ್ವರನ್ನು ದೋಷಿಗಳೆಂದು ಘೋಷಿಸಿ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 19 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಈ ತೀರ್ಪು ನಕಲಿ ದಾಖಲೆಗಳ ಮೂಲಕ ಸರಕಾರಿ ಉದ್ಯೋಗ ಪಡೆಯುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ.






