Belagavi | 198 ಮತದಾರರ ಹೆಸರು ಅಳಿಸಲು ನಕಲಿ ದಾಖಲೆ ಬಳಕೆ ಆರೋಪ : 25 ಜನರ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ
ಬೆಳಗಾವಿ : ವೀರಭದ್ರನಗರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 198 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಕಲಿ ದಾಖಲೆ ಹಾಗೂ ಸುಳ್ಳು ಮಾಹಿತಿ ನೀಡಿ ಫಾರ್ಮ್ ನಂ.7 ಸಲ್ಲಿಸಲು ಯತ್ನಿಸಿದ ಆರೋಪದಡಿ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಸೇರಿದಂತೆ 25 ಜನರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಾರ್ಡ್ ನಂ.12ರ ಬೂತ್ ಮಟ್ಟದ ಅಧಿಕಾರಿ ಸೆಪ್ಟೆಂಬರ್ 30ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಾ. ರವಿ ಪಾಟೀಲ್, ಪ್ರಶಾಂತ ಮುಂದಿನಮನಿ, ಶಂಕರ್ ನಾಯಕ್ ಸೇರಿದಂತೆ ಇತರರನ್ನು ಆರೋಪಿಗಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 22ರಂದು ವೀರಭದ್ರನಗರದ ಮತಗಟ್ಟೆ ಸಂಖ್ಯೆ 195 ಮತ್ತು 196ರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಮತದಾರರ ಪಟ್ಟಿಯಲ್ಲಿ ಕಾನೂನುಬದ್ಧವಾಗಿ ಹೆಸರು ಹೊಂದಿರುವ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು, ಅವರ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್ ನಂ.7 ಮೂಲಕ ಬೋಗಸ್ ಅರ್ಜಿಗಳನ್ನು ಸಲ್ಲಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ವೇಳೆ ಸ್ಥಳೀಯರು ಡಾ. ರವಿ ಪಾಟೀಲ್ ಸೇರಿದಂತೆ ಮೂವರನ್ನು ತಡೆದು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು.
ಘಟನೆ ನಡೆದ ಎಂಟು ದಿನಗಳ ಬಳಿಕ ಬಿಎಲ್ಒ ನೀಡಿದ ದೂರಿನ ಆಧಾರದ ಮೇಲೆ ಮಾರ್ಕೆಟ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ಹಾಗೂ ಫಾರ್ಮ್ ನಂ.7 ಅರ್ಜಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.






