ಕಿತ್ತೂರು ಉತ್ಸವಕ್ಕೆ ಅದ್ದೂರಿ ಚಾಲನೆ: ಜಾನಪದ ಕಲಾವಾಹಿನಿಗಳ ವೈಭವಕ್ಕೆ ಸಾಕ್ಷಿಯಾದ ಐತಿಹಾಸಿಕ ನಾಡು

ಬೆಳಗಾವಿ : ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ಸ್ಮರಣಾರ್ಥ ಆಯೋಜಿಸಿರುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಶುಕ್ರವಾರ ಕಿತ್ತೂರಿನಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಶುಕ್ರವಾರದಿಂದ ಅ.25ರವರೆಗೆ ನಡೆಯಲಿರುವ ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ. ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸ್ಥಳೀಯರು ಮನೆಗಳನ್ನು ಸಿಂಗರಿಸಿ ಅತಿಥಿಗಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಚನ್ನಮ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸ್ವಾಗತಿಸಿ, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಶಾಸಕ ಬಾಬಾಸಾಹೇಬ ಪಾಟೀಲ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ವೀರರಾಣಿ ಕಿತ್ತೂರು ಚೆನ್ನಮ್ಮ ಸೇರಿದಂತೆ ವಿವಿಧ ಮಹನೀಯರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಲ್ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾನಪದ ಕಲಾವಾಹಿನಿಗಳ ಮೆರವಣಿಗೆ ಆಕರ್ಷಣೆ
ಉತ್ಸವದ ಅಂಗವಾಗಿ ನಡೆದ ಜಾನಪದ ಕಲಾವಾಹಿನಿಗಳ ಮೆರವಣಿಗೆ ಜನರ ಗಮನ ಸೆಳೆಯಿತು. ಡೊಳ್ಳುಕುಣಿತ, ಜಗ್ಗಲಗಿ, ಕರಡಿ ಮಜಲು, ಗೊಂಬೆ ಕುಣಿತ, ಕಂಸಾಳೆ, ಚಂಡೆ ವಾದನ, ಕರ್ಬಲ ಕುಣಿತ ಹಾಗೂ ನಾಸಿಕ ಡೋಲು ಸೇರಿದಂತೆ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನದ ಮೂಲಕ ಉತ್ಸವದ ಮೆರುಗು ಹೆಚ್ಚಿಸಿದವು.






