Belagavi | ದರೋಡೆ ಪ್ರಕರಣ; 8 ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : Image by wirestock on Magnific
ಬೆಳಗಾವಿ : ಒಂದು ಲಕ್ಷ ರೂಪಾಯಿ ನಗದು ನೀಡಿದರೆ ಬ್ಯಾಂಕ್ ಖಾತೆಗೆ 1.30 ಲಕ್ಷ ರೂಪಾಯಿ ಜಮೆ ಮಾಡುವುದಾಗಿ ಆಮಿಷವೊಡ್ಡಿ ಐವರಿಂದ ಸಂಗ್ರಹಿಸಿದ್ದ 2.68 ಕೋಟಿ ರೂಪಾಯಿ ಹಣವನ್ನು ದರೋಡೆ ಮಾಡಿದ ಪ್ರಕರಣವನ್ನು ಮೂಡಲಗಿ ಪೊಲೀಸರು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿದ್ದು, 2.39 ಕೋಟಿ ರೂಪಾಯಿ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ ಡಿಆರ್ ಕಾನ್ಸ್ಟೇಬಲ್ ಚಿದಾನಂದ ಸಿದ್ಧಾರೂಢ ಕುರಬೆಟ್, ರಾಜಾರಾಮ ಸುರೇಶ ಮಾಳ್ಯಾಗೋಳ, ರಮೇಶ ದುಂಡಪ್ಪ ಮಾಳ್ಯಾಗೋಳ, ವಿಠ್ಠಲ ಸುರೇಶ ಮಾಳ್ಯಾಗೋಳ, ತುಕ್ಕಾನಟ್ಟಿ ಗ್ರಾಮದ ಸಂಜೀವ ರಾಮಪ್ಪ ಅರಭಾವಿ, ಮಾರುತಿ ಅರಭಾವಿ, ಗೋಕಾಕಿನ ಪ್ರಕಾಶ ರಾಮಲಿಂಗಪ್ಪ ಮೇಳವಂಕಿ ಹಾಗೂ ರಾಘವೇಂದ್ರ ಪ್ರಕಾಶ ಕೊಪ್ಪದ ಎಂದು ಗುರುತಿಸಲಾಗಿದೆ. ಬಂಧಿತರಿಂದ 2.39 ಕೋಟಿ ರೂಪಾಯಿ ನಗದು, ಎರಡು ಬೈಕ್ಗಳು, ಒಂದು ಕಾರು ಹಾಗೂ ಹಣ ಎಣಿಕೆ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಕಾನ್ಸ್ಟೇಬಲ್ನಿಂದಲೇ ದರೋಡೆಗೆ ಸಂಚು!
ಆರೋಪಿ ಚಿದಾನಂದ ಕುರಬೆಟ್ ಒಂದು ಲಕ್ಷ ರೂ. ನೀಡಿದರೆ ಬ್ಯಾಂಕ್ ಖಾತೆಗೆ 1.30 ಲಕ್ಷ ರೂಪಾಯಿ ಜಮೆ ಮಾಡುವುದಾಗಿ ಜನರನ್ನು ನಂಬಿಸಿದ್ದ. ಇದನ್ನು ನಂಬಿದ ದೂರುದಾರ ಕಲ್ಮೇಶ ಬಸವರಾಜ ರಂಗಾಪುರ 48 ಲಕ್ಷ ರೂ., ಅವರ ಸೋದರಮಾವ ಚನ್ನಬಸಪ್ಪ 40 ಲಕ್ಷ ರೂ., ಬೀರಪ್ಪ ವನಸನ್ನಿ 50 ಲಕ್ಷ ರೂ., ಗೋಕಾಕಿನ ಕಲ್ಮೇಶ 50 ಲಕ್ಷ ರೂ. ಹಾಗೂ ಶಂಕರ ಜಕ್ಕಣ್ಣವರ 80 ಲಕ್ಷ ರೂ.ನೀಡಿದ್ದರು. ಈ ಮೂಲಕ ಒಟ್ಟು 2.68 ಕೋಟಿ ರೂ. ಸಂಗ್ರಹಿಸಲಾಗಿತ್ತು.
ಈ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಚಿದಾನಂದ ಸಂಚು ರೂಪಿಸಿದ್ದ. ಹಣವನ್ನು ಶೆಡ್ನಲ್ಲಿ ಎಣಿಕೆ ಮಾಡೋಣ ಎಂದು ನಂಬಿಸಿ ಬೀರಪ್ಪ ವನಸನ್ನಿ ಅವರ ಶೆಡ್ಗೆ ಹಣ ತರಿಸಿದ್ದ. ಅ.30ರ ರಾತ್ರಿ 11:45ರ ಸುಮಾರಿಗೆ ಖಾರದಪುಡಿ ಹಿಡಿದು ಬಂದ ಆರೋಪಿಗಳು ಶೆಡ್ ಮೇಲೆ ದಾಳಿ ನಡೆಸಿದ್ದರು. ಚನ್ನಬಸಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ, ಹಗ್ಗದಿಂದ ಹಲ್ಲೆ ನಡೆಸಿ, ಐದು ಬ್ಯಾಗ್ಗಳಲ್ಲಿದ್ದ 2.68 ಕೋಟಿ ರೂ. ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






