ಅಂತರ್ಜಾತಿ ವಿವಾಹ ಮಾಡಿಸಿದ ಆರೋಪ; ಜ್ಯೋತಿಷಿಯ ಹತ್ಯೆ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ (AI)
ಬೆಳಗಾವಿ : ಅಂತರ್ಜಾತಿ ವಿವಾಹ ಮಾಡಿಸಿದ ಕಾರಣಕ್ಕೆ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ, ಜ್ಯೋತಿಷಿಯನ್ನು ಸಂಚುಹೂಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾನಕಾಪುರ ಗ್ರಾಮದ ಹೊರವಲಯದಲ್ಲಿ ವರದಿಯಾಗಿದೆ.
ಸದಲಗಾ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಇಚಲಕರಂಜಿ ನಿವಾಸಿ, ಜ್ಯೋತಿಷಿ ಹಾಗೂ ಮದುವೆ ಮಾಡಿಸುತ್ತಿದ್ದ ಮಂದಾರ್ ಅಜಿತ್ ರಾಂಡೆ (35) ಕೊಲೆಯಾದ ವ್ಯಕ್ತಿ. ಮಹಾರಾಷ್ಟ್ರದ ನೀರದಾಸ್ವಿಡ್ ನಿವಾಸಿ ಬಾಬಾಸಾಹೇಬ್ ಅಯಾಸಾಹೇಬ್ ಅಣ್ಣಾ ಮುಕುದುಮ್ ಬಂಧಿತ ಆರೋಪಿಯಾಗಿದ್ದಾನೆ.
ಪೊಲೀಸರ ಮಾಹಿತಿಯಂತೆ, ಜನವರಿ 13, 2026ರಂದು ಆರೋಪಿ ಬಾಬಾಸಾಹೇಬ್ ಅವರ 19 ವರ್ಷದ ಮಗಳು, ಮಹಾರಾಷ್ಟ್ರದ ಶಿವನಾಯಕ ವಾಡಿಯ ಯುವಕನೊಂದಿಗೆ ಮನೆ ತೊರೆದು ಅಂತರ್ಜಾತಿ ವಿವಾಹವಾಗಿದ್ದಳು. ಈ ಮದುವೆಯನ್ನು ಮೃತ ಮಂದಾರ್ ರಾಂಡೆ ಮಾಡಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಬಾಬಾಸಾಹೇಬ್, ಮಂದಾರ್ ವಿರುದ್ಧ ತೀವ್ರ ದ್ವೇಷ ಬೆಳೆಸಿಕೊಂಡಿದ್ದನು. ಮಂದಾರ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ, ಅಕ್ಟೋಬರ್ 31, 2026 ರಂದು ಬೇರೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ಇನ್ನೊಂದು ಮದುವೆ ಮಾಡಿಸುವುದಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಆರೋಪಿಯ ಮಾತು ನಂಬಿದ ಮಂದಾರ್, ಇಚಲಕರಂಜಿಯಿಂದ ಮಾನಕಾಪುರ ಗ್ರಾಮದ ಹೊರವಲಯಕ್ಕೆ ತಲುಪಿದ್ದರು.
ಮಂದಾರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಆರೋಪಿ ಬಾಬಾಸಾಹೇಬ್ ಅವರ ಕಣ್ಣಿಗೆ ಖಾರದ ಪುಡಿಯನ್ನು ಎರಚಿದ್ದಾನೆ. ಮಂದಾರ್ ಚೀರಾಡುತ್ತಿದ್ದಂತೆ, ತಾನು ತಂದಿದ್ದ ಕುಡುಗೋಲಿನಿಂದ ಕುತ್ತಿಗೆಯ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಂದಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಈ ಸಂಬಂಧ ಇಚಲಕರಂಜಿಯ ಚಂದ್ರಕಾಂತ ಕುಲಕರ್ಣಿ ನೀಡಿದ ದೂರಿನನ್ವಯ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






