Belagavi | ದರೋಡೆಗೆ ಯತ್ನ: ಶಾಸಕನ ಗನ್ಮ್ಯಾನ್ ಸಹಿತ 7 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : Image by macrovector on Magnific
ಬೆಳಗಾವಿ : ಹಣ ದುಪ್ಪಟ್ಟು ಮಾಡಿಕೊಡುವ ಆಮಿಷವೊಡ್ಡಿ 2.68 ಕೋಟಿ ರೂಪಾಯಿ ದರೋಡೆಗೆ ಯತ್ನಿಸಿದ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಅವರ ಗನ್ಮ್ಯಾನ್ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿ ಪಟ್ಟಣದಲ್ಲಿ ಅಕ್ಟೋಬರ್ 30ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಗನ್ಮ್ಯಾನ್ ಚಿದಾನಂದ ಕುರಬೆಟ್ ಅವರನ್ನು ಅಮಾನತುಗೊಳಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಆದೇಶ ಹೊರಡಿಸಿದ್ದಾರೆ.
ಮೂಡಲಗಿ ಪಟ್ಟಣದ ಕಲ್ಮೇಶ್ ಎಂಬ ವ್ಯಕ್ತಿ ಶಿವಂ ಅಸೋಸಿಯೇಟ್ಸ್ನಲ್ಲಿ ಹಣ ಕಳೆದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಚಿದಾನಂದ ಕುರಬೆಟ್, ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿದ್ದಾನೆ. 1 ಲಕ್ಷ ರೂ. ನೀಡಿದರೆ ಹೆಚ್ಚುವರಿಯಾಗಿ 30 ಸಾವಿರ ರೂ. ನೀಡುವುದಾಗಿ ಆಮಿಷವೊಡ್ಡಿ, ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಭರವಸೆ ನೀಡಿದ್ದಾನೆ.
ಗನ್ಮ್ಯಾನ್ ಮಾತು ನಂಬಿದ ಕಲ್ಮೇಶ್, ಬ್ಯಾಂಕ್, ಸೊಸೈಟಿ ಹಾಗೂ ಸ್ನೇಹಿತರಿಂದ ಬರೋಬ್ಬರಿ 2.68 ಕೋಟಿ ರೂ. ಸಂಗ್ರಹಿಸಿದ್ದಾರೆ. ಬಳಿಕ ಚಿದಾನಂದ ಕುರಬೆಟ್ಗೆ ಕರೆ ಮಾಡಿ ಹಣ ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಹಣ ಎಣಿಕೆ ಮಾಡುವ ನೆಪದಲ್ಲಿ ಚಿದಾನಂದ ಕುರಬೆಟ್ ಹಾಗೂ ಆತನ ತಂಡ ಕಲ್ಮೇಶ್ ಅವರನ್ನು ಶೆಡ್ಗೆ ಕರೆಸಿಕೊಂಡಿದೆ. ಕಲ್ಮೇಶ್ ಹಣ ತರುತ್ತಿದ್ದಂತೆ ಆರೋಪಿಗಳು ಶೆಡ್ ಮೇಲೆ ದಾಳಿ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಕಲ್ಮೇಶ್ ಮುನ್ನೆಚ್ಚರಿಕೆಯಾಗಿ ಶೆಡ್ ಸುತ್ತಮುತ್ತ ತನ್ನ ಹುಡುಗರನ್ನು ಕಾವಲು ನಿಲ್ಲಿಸಿದ್ದರು. ಆರೋಪಿಗಳು ದಾಳಿ ನಡೆಸುತ್ತಿದ್ದಂತೆ ಹೊರಗಿದ್ದ ಯುವಕರು ಅವರನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್, ರಾಘವೇಂದ್ರ ಕೊಪ್ಪದ್ ಹಾಗೂ ರಾಮಪ್ಪ ತಳವಾರ ಎಂಬ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2.39 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯಲ್ಲಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಉಳಿದ ಹಣದ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






