ಬೆಳಗಾವಿಯಲ್ಲಿ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನ; ಕ್ಷೇಮನಿಧಿ ಸ್ಥಾಪನೆಗೆ ಆಗ್ರಹ

ಬೆಳಗಾವಿ : ಸಂಪಾದಕರು ಮತ್ತು ವರದಿಗಾರರಷ್ಟೇ ಪತ್ರಿಕಾ ವಿತರಕರ ಪಾತ್ರವೂ ಮಹತ್ವದ್ದಾಗಿದೆ. ಸುದ್ದಿಗಳು ಹಳೆಯದಾಗುವ ಮುನ್ನವೇ ಓದುಗರ ಮನೆಬಾಗಿಲಿಗೆ ತಲುಪಿಸುವ ವಿತರಕರು ಪತ್ರಿಕೋದ್ಯಮದ ಬೆನ್ನೆಲುಬು ಹಾಗೂ ನಿಜವಾದ ಹೀರೋಗಳು ಎಂದು ಮುಖ್ಯಮಂತ್ರಿಗಳ ನಿಕಟಪೂರ್ವ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಬಣ್ಣಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ನ್ಯೂಸ್‌ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಸಹಯೋಗದಲ್ಲಿ ನಗರದ ಧರ್ಮನಾಥ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡವ-ಶ್ರೀಮಂತ, ಜಾತಿ-ಧರ್ಮದ ಭೇದವಿಲ್ಲದೆ ಬೆಳಗ್ಗೆ ಜನರು ಎದ್ದು ದೇವರನ್ನು ಸ್ಮರಿಸುವ ಮುನ್ನವೇ ಮನೆಗೆ ಪತ್ರಿಕೆ ತಲುಪಿಸುವ ವಿತರಕರ ಸೇವೆ ಅನನ್ಯವಾದುದು. ಪತ್ರಿಕೆಗಳು ವಿತರಕರನ್ನು ಗೌರವದಿಂದ ಕಾಣಬೇಕು. ವಿಮಾ ಪರಿಹಾರ ಯೋಜನೆಯ ಕಠಿಣ ನಿಯಮಗಳನ್ನು ಸಡಿಲಿಸುವಂತೆ ಕಾರ್ಮಿಕ ಸಚಿವರ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ದೇಶದಲ್ಲಿ ಸುಮಾರು 25 ಲಕ್ಷ ಪತ್ರಿಕಾ ವಿತರಕರಿದ್ದಾರೆ. ರಾಜ್ಯ ಸರ್ಕಾರದ ವಿಮಾ ಯೋಜನೆಯ ಕಠಿಣ ಷರತ್ತುಗಳನ್ನು ಸಡಿಲಿಸುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಚರ್ಚಿಸಲಾಗುವುದು. ಕೆಯುಡಬ್ಲ್ಯೂಜೆ ಸದಾ ವಿತರಕರ ಬೆನ್ನಿಗೆ ನಿಲ್ಲಲಿದೆ ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಮಾತನಾಡಿ, ಸಂಕಷ್ಟದಲ್ಲಿರುವ ವಿತರಕರಿಗೆ ನೆರವಾಗಲು ಚಾರಿಟಬಲ್ ಟ್ರಸ್ಟ್ ನೋಂದಾಯಿಸಲಾಗಿದೆ ಎಂದರು. ಈ ವೇಳೆ ಕೆ.ವಿ. ಪ್ರಭಾಕರ, ಶಿವಾನಂದ ತಗಡೂರು ಹಾಗೂ ದಿಲೀಪ್ ಕುರಂಡವಾಡೆ ಅವರು ಟ್ರಸ್ಟ್‌ಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ದೇಣಿಗೆ ಘೋಷಿಸಿದರು. ಇದೇ ಸಂದರ್ಭದಲ್ಲಿ ಚಾರಿಟಬಲ್ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಕೆ.ವಿ. ಪ್ರಭಾಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮುಖ್ಯಮಂತ್ರಿಗಳು ಘೋಷಿಸಿದ್ದ 2 ಕೋಟಿ ರೂ. ಕ್ಷೇಮಾಭಿವೃದ್ಧಿ ನಿಧಿಯನ್ನು ತಕ್ಷಣ ಜಾರಿಗೊಳಿಸಿ, ಅದನ್ನು 10 ಕೋಟಿ ರೂ.ಗಳಿಗೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರವೂ ಪ್ರತ್ಯೇಕ ಕ್ಷೇಮನಿಧಿ ಸ್ಥಾಪಿಸಬೇಕು ಹಾಗೂ ಮಾಧ್ಯಮ ಅಕಾಡೆಮಿ ಮಾದರಿಯಲ್ಲಿ ಪತ್ರಿಕಾ ವಿತರಕರಿಗಾಗಿ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಸಮ್ಮೇಳನದಲ್ಲಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಜವರಪ್ಪ ಹಾಗೂ ತುಮಕೂರಿನ ಲಕ್ಷ್ಮೀನರಸಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಂಪಾದಕರಾದ ಸುರೇಶ್ ಕೆ. ಸೇರಿದಂತೆ ಮಹೇಶ್ ವಿಜಾಪುರೆ, ಸಂತೋಷ್ ಚಿನಗುಡಿ, ಬ್ರಹ್ಮಾನಂದ ಹಡಗಲಿ, ಕಿರಣ್ ಠಾಕೂರ್, ಮಲ್ಲಿಕಾರ್ಜುನ್ ಮುಗಳಿ, ಎನ್.ಆರ್. ರಾಮಚಂದ್ರ, ಮಂಜುನಾಥ ಕೊಸನಲಾಳ, ಸಂದೀಪ್ ಮೂಲಿಮನಿ, ವೈಭವ ಕುಬ್ಬದ, ಮಾರುತಿ ಕೋಳೆಕರ್, ರವಿ ಪೂಜಾರ, ಮಂಜುನಾಥ ಕೊಸಗಿ, ಅಪ್ಪಣ್ಣ ಮೇತ್ರಿ ಹಾಗೂ ಗೋಪಾಲ ಗೌಡ ಅವರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿ ಜಿಲ್ಲಾ, ತಾಲೂಕು ಹಾಗೂ ನಗರ ಮಟ್ಟದ ಪತ್ರಿಕಾ ವಿತರಕರ ಸೇವಾ ರತ್ನ ಪ್ರಶಸ್ತಿಯನ್ನು ರಾಜು ಮುಚ್ಚಂಡಿ, ಬಾಳು ಮಾಯಣ್ಣಾಚೆ, ಪ್ರಫುಲ್ ಕುಡಲೆ, ನಾಗೇಶ ಕುಲಕರ್ಣಿ, ಜಗನ್ನಾಥ ಮಾಜೆಕರ್, ದೀಪಕ್ ಘೋರ್ಪಡೆ, ಸುಭಾಷ್ ಪಾಟೀಲ, ಅಶೋಕ ಶಿಂಧೆ, ಸರೋದೆ, ಸುಧೀರ್ ಕುಲಕರ್ಣಿ, ರಾಜು ಗಾಲಿ, ಯಾಸೀನ್ ಕಿತ್ತೂರು, ಸಂಜಯ ಕದಂ, ವೀರೇಂದ್ರ ಕಿತ್ತೂರು, ಪ್ರಭಾತ ಖೋತ್, ಕಿರಣ್ ಬಿಡಕರ, ಶಿವಾಜಿ ಮೇತ್ರಿ, ಪ್ರಕಾಶ ಅಸುಂಡಿ, ಬಾಳೋಜಿ, ನಾಗರಾಜ ಜೋರಾಪುರ, ಉದಯ ದೇಸಾಯಿ, ಗುಂಡು ಪಾಟೀಲ, ಕೃಷ್ಣಪ್ಪ ಗಿರೆಣ್ಣವರ, ವಿರಕ್ತಮಠ, ವಿಶ್ವನಾಥ ಪಾಟೀಲ, ಪ್ರಭಾಕರ ಹುಲಿ, ಚಂದ್ರಕಾಂತ ಮುತಗೇಕರ್ ಹಾಗೂ ಆದಿತ್ಯ ಮಾಯಂಕರ್ ಅವರಿಗೆ ಪ್ರದಾನ ಮಾಡಲಾಯಿತು.
ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಗೌರವಾಧ್ಯಕ್ಷ ಪ್ರತಾಪ್ ಭೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಪಿ., ದೀಪಕ್ ರಾಜಗೋಳಕರ, ರಾಜಾ ಭೋಸಲೆ, ಪ್ರಶಾಂತಕುಮಾರ ಎನ್. ಮತ್ತಿತರರು ಉಪಸ್ಥಿತರಿದ್ದರು. ಶಿವಾಜಿ ಮೇತ್ರಿ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ನಿರೂಪಿಸಿದರು. ಯಾಸಿನ್ ಕಿತ್ತೂರು ವಂದಿಸಿದರು.






