ಬೆಳಗಾವಿ | ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಅನುಮಾನಾಸ್ಪದ ಸಾವು

ಬೆಳಗಾವಿ | ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 4–5 ವರ್ಷದ ಕೃಷ್ಣಮೃಗ (ಬ್ಲ್ಯಾಕ್ ಬಕ್) ಸಾವಿನ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.
ಈ ಕುರಿತು ಮೃಗಾಲಯದ ಎಸಿಫ್ ನಾಗರಾಜ್ ಬಾಳೆಹೊಸೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೃಗಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್‌ನಿಂದ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.
ಒಟ್ಟು 38 ಕೃಷ್ಣಮೃಗಗಳಲ್ಲಿ ಇದುವರೆಗೆ 28 ಮೃಗಗಳು ಎರಡೇ ದಿನಗಳಲ್ಲಿ ಸಾವನ್ನಪ್ಪಿದ್ದು, ಮೊದಲ ದಿನ 18 ಕೃಷ್ಣಮೃಗಗಳು ಸಾವನ್ನಪ್ಪಿದ್ದರೆ, ಎರಡನೇ ದಿನ 10 ಕೃಷ್ಣಮೃಗಗಳು ಸಾವನ್ನಪ್ಪಿವೆ.
ಅನುಮಾನಾಸ್ಪದವಾಗಿ ಮೃತಪಟ್ಟ ಕೃಷ್ಣಮೃಗಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮೃಗಗಳ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಮೇಲಧಿಕಾರಿಗಳ ತುರ್ತು ಪರಿಶೀಲನೆ :
ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಸಂಭವಿಸಿರುವ ಕೃಷ್ಣಮೃಗಗಳ ಸರಣಿ ಸಾವುಗಳ ಹಿನ್ನೆಲೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೃಗಾಲಯಕ್ಕೆ ಆಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಮೃಗಾಲಯದ ಸಂಪೂರ್ಣ ಪರಿಸರ, ಕೊಠಡಿಗಳು ಹಾಗೂ ಮೃಗಗಳ ನಿಲಯಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರಾಣಿಗಳ ಆಹಾರ, ನೀರು, ವೈದ್ಯಕೀಯ ದಾಖಲೆಗಳು ಮತ್ತು ಇತರೆ ನಿರ್ವಹಣಾ ಕ್ರಮಗಳನ್ನೂ ಪರಿಶೀಲನೆಗೆ ಒಳಪಡಿಸಿದ್ದಾರೆ. ತ್ವರಿತ ವರದಿ ಸಲ್ಲಿಸುವಂತೆ ಮೃಗ ವೈದ್ಯರು ಹಾಗೂ ಮೃಗಾಲಯದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.







