Belagavi | ಹಲ್ಲೆ ಆರೋಪ; ಶಾಸಕ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿ ಸೇರಿ 8 ಮಂದಿ ವಿರುದ್ಧ ಎಫ್‌ಐಆರ್

ಬೆಳಗಾವಿ : ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಅಧ್ಯಕ್ಷ ಕರೆಣ್ಣವರ್ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ಸೇರಿ 8 ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕರೆಣ್ಣವರ್ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಆರೋಪಿಗಳು ಮನೆಗೆ ಕರೆಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಶಾಸಕ ಲಕ್ಷ್ಮಣ ಸವದಿ ಕಪಾಳಕ್ಕೆ ಹೊಡೆದಿದ್ದು, ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದಿದ್ದಾನೆ. ಈ ವೇಳೆ ನೆಲಕ್ಕೆ ಬಿದ್ದ ತಮ್ಮ ಮೇಲೆ 7 ರಿಂದ 8 ಜನರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಕರೆಣ್ಣವರ್ ದೂರಿನಲ್ಲಿ ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆ ಪ್ರಕಾರ 189(2), 191(2), 115(2), 351(2), 352 ಹಾಗೂ 190 ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.







