Belagavi | ಹೊಸ ವಂಟಮೂರಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ : 12 ಆರೋಪಿಗಳು ತಪ್ಪಿತಸ್ಥರು; ಶಿಕ್ಷೆಯ ಪ್ರಮಾಣ ನಾಳೆ ಪ್ರಕಟ

ಬೆಳಗಾವಿ : ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಅಮಾನವೀಯ ಪ್ರಕರಣದಲ್ಲಿ 12 ಆರೋಪಿಗಳು ತಪ್ಪಿತಸ್ಥರು ಎಂದು ಬೆಳಗಾವಿಯ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು.
2023ರ ಡಿಸೆಂಬರ್ 11ರಂದು ನಡೆದ ಈ ಪ್ರಕರಣ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು. ಪ್ರೀತಿಸಿದ ಯುವತಿಯೊಂದಿಗೆ ಯುವಕ ಮನೆಬಿಟ್ಟು ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಆತನ ಕುಟುಂಬದ ಮೇಲೆ ಕೋಪಗೊಂಡ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು.
ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಒಬ್ಬ ಬಾಲಾಪರಾಧಿ ಸೇರಿ 13 ಜನ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು, 12 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಆರೋಪಿ ಕುರಿತು ವಿಚಾರಣೆ ಇನ್ನೂ ಬಾಕಿ ಇದೆ.
ಈ ಪ್ರಕರಣದಲ್ಲಿ ಆರು ಪುರುಷರು ಹಾಗೂ ಆರು ಮಹಿಳೆಯರು ಸೇರಿ 12 ಮಂದಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ಪ್ರಕರಣದ ಬಳಿಕ ರಾಷ್ಟ್ರೀಯ ಹಾಗೂ ರಾಜ್ಯ ಮಹಿಳಾ ಆಯೋಗಗಳು ಮತ್ತು ಸತ್ಯಸಂಶೋಧನಾ ಸಮಿತಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದವು.







