ಬೆಳಗಾವಿ: ಹೆರಾಯಿನ್ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ

ಬೆಳಗಾವಿ: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಹೆರಾಯಿನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 3 ಲಕ್ಷ ರೂ. ಮೌಲ್ಯದ ಹೆರಾಯಿನ್ ಪೌಡರ್ ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅ. 17ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿ ಸಮೀಪದ ಜೈ ಕಿಸಾನ್ ಬಾಜಿ ಮಾರ್ಕೆಟ್ನ ಗೇಟ್ ನಂ. 1ರ ಬಳಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಾಂತೇಶ ರಾಮಣ್ಣ ಅಂಬಿಗೇರ (37) ಹಾಗೂ ಆಕಾಶ ಸುರೇಶ ನಂದಿ (28) ಎಂಬುವರನ್ನು ಬಂಧಿಸಲಾಯಿತು.
ಬಂಧಿತರಿಂದ 2.90 ಲಕ್ಷ ರೂ. ಮೌಲ್ಯದ 14.49 ಗ್ರಾಂ ಹೆರಾಯಿನ್ ಪೌಡರ್ ಅನ್ನು 124 ಸಣ್ಣ ಪ್ಯಾಕೆಟ್ಗಳಲ್ಲಿ ಹಾಗೂ 10 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಮಹಾರಾಷ್ಟ್ರದ ‘ಅಮ್ಮ’ ಎಂಬಾಕೆಯಿಂದ ಹೆರಾಯಿನ್ ಪೌಡರ್ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 21(ಬಿ) ಮತ್ತು 8(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.






