ಬೆಳಗಾವಿ | ಬಿಡಿಸಿಸಿ ಬ್ಯಾಂಕ್ ವರ್ಕರ್ಸ್ ಯೂನಿಯನ್ ಅಧ್ಯಕ್ಷರ ಮೇಲೆ ಶಾಸಕ ಲಕ್ಷ್ಮಣ ಸವದಿ ಪುತ್ರ, ಬೆಂಬಲಿಗನಿಂದ ಹಲ್ಲೆ: ಆರೋಪ

ಬೆಳಗಾವಿ: ಬಿಡಿಸಿಸಿ ಬ್ಯಾಂಕ್(ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ವರ್ಕರ್ಸ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರ ಮೇಲೆ ಬ್ಯಾಂಕಿನ ನಿರ್ದೇಶಕರೂ ಆಗಿರುವ ಶಾಸಕ ಲಕ್ಷ್ಮಣ ಸವದಿಯವರ ಮನೆ ಆವರಣದಲ್ಲಿ ಶನಿವಾರ ಹಲ್ಲೆ ನಡೆದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬ್ಯಾಂಕ್ ಕೆಲಸದ ವಿಚಾರವಾಗಿ ಚರ್ಚಿಸಲು ಶಾಸಕ ಲಕ್ಷ್ಮಣ ಸವದಿ ಮನೆಗೆ ತೆರಳಿದ್ದೆ. ಈ ವೇಳೆ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರು ಅವಾಚ್ಯ ಪದ ಬಳಸಿ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ನಿಂಗಪ್ಪ ಕರೆಣ್ಣವರ ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿಂಗಪ್ಪ ಕರೆಣ್ಣ ಈ ಬಗ್ಗೆ ಪೊಲೀಸ್ ದೂರು ನೀಡಿಲ್ಲ.
ಹಲ್ಲೆಗೂ ನಮಗೂ ಸಂಬಂಧವಿಲ್ಲ: ಸವದಿ
ಯೂನಿಯನ್ ಒಳಗಿನ ಭಿನ್ನಾಭಿಪ್ರಾಯಗಳ ವಿಚಾರವಾಗಿ ನಿಂಗರಾಜ ನಮ್ಮ ಮನೆಗೆ ಬಂದಿದ್ದರು. “ಅಧ್ಯಕ್ಷರು ಹಣ ನೀಡಬೇಕು ಎಂದು ಹೇಳುತ್ತಿದ್ದಾರೆ ಎಂಬ ವಿಷಯವನ್ನು ನನ್ನ ಮುಂದಿಟ್ಟರು. ಈ ವಿಚಾರವಾಗಿ ನನ್ನ ಬಳಿ ಹೇಳಬೇಡಿ, ನಿಮ್ಮ ಒಳಜಗಳವನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ತಿಳಿಸಿ ಹೇಳಿದ್ದೇನೆ” ಎಂದು ಸವದಿ ಹೇಳಿದರು.
ಬಳಿಕ ಮನೆ ಹೊರಗಡೆ ಇದ್ದ ತಮ್ಮ ಕಾರ್ಯಕರ್ತ ಶ್ರೀಕಾಂತ್ ಆಲಗೂರ “ಈ ವಿಚಾರವನ್ನು ಇಲ್ಲಿಗೆ ಯಾಕೆ ತಂದಿರಿ?” ಎಂದು ಪ್ರಶ್ನಿಸಿದಾಗ ನಿಂಗರಾಜ ಅವಾಚ್ಯ ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ನೂಕಾಟ ನಡೆದಿದೆ. ಇದು ಅವರಿಬ್ಬರ ನಡುವಿನ ಗಲಾಟೆ; ನನಗೂ ನನ್ನ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಸವದಿ ಸ್ಪಷ್ಟನೆ ನೀಡಿದ್ದಾರೆ.
ನಿಂಗಪ್ಪ ಕರೆಣ್ಣವರ ವಿರುದ್ಧ ದೂರು
ಈ ಮಧ್ಯೆ ತನ್ನ ಮೇಲೆ ಬಿಡಿಸಿಸಿ ಬ್ಯಾಂಕ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಹಲ್ಲೆ ಮಾಡಿರುವುದಾಗಿ ಶ್ರೀಕಾಂತ್ ಆಲಗೂರ ಎಂಬವರು ಪೊಲೀಸ್ ದೂರು ನೀಡಿದ್ದಾರೆ.
ಶಾಸಕ ಲಕ್ಷ್ಮಣ ಸವದಿಯವರ ಮನೆಯ ಆವರಣದಲ್ಲಿ ನಿಂಗಪ್ಪ ಕರೆಣ್ಣವರ ಅವಾಚ್ಯ ಪದ ಬಳಸಿ ಜಾತಿ ನಿಂದನೆ ಮಾಡಿದ್ದಲ್ಲದೆ, ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಶ್ರೀಕಾಂತ್ ಆಲಗೂರ ಆರೋಪಿಸಿದ್ದಾರೆ.
ಬ್ಯಾಂಕ್ ನೌಕರರಿಂದ ಧರಣಿ
ನಿಂಗಪ್ಪ ಕರೆಣ್ಣವರ ಮೇಲಿನ ಹಲ್ಲೆಯನ್ನು ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬಿಡಿಸಿಸಿ ಬ್ಯಾಂಕ್ ನೌಕರರು ಶನಿವಾರ ಅಥಣಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು.
ನಗರದ ಪ್ರಮುಖ ರಸ್ತೆ ಮೂಲಕ ಮೆರವಣಿಗೆ ನಡೆಸಿದ ನೌಕರರು, ಲಕ್ಷ್ಮಣ ಸವದಿ ಕುಟುಂಬದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಥಣಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.







