Belagavi | 40 ಅಡಿ ಆಳದ ಬಾವಿಗೆ ಬಿದ್ದ ಎಮ್ಮೆ; ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಸ್ಥಳೀಯರು

ಬೆಳಗಾವಿ: ಕಾಲು ಜಾರಿ ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಎಮ್ಮೆಯನ್ನು ಸ್ಥಳೀಯರು ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಿಗೇರಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಬಾರಿಗಡ್ಡಿ ತೋಟದಲ್ಲಿರುವ ರೈತರೊಬ್ಬರ ಜಮೀನಿನ ಬಾವಿಗೆ ಎಮ್ಮೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದೆ. ಬಾವಿಗೆ ಎಮ್ಮೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು.
ಹಗ್ಗಗಳ ಸಹಾಯದಿಂದ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಗ್ರಾಮಸ್ಥರು ಸುಮಾರು ಎರಡು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರು. ಬಳಿಕ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು.
ರವಿವಾರ ಬೆಳಗ್ಗೆ ಸುಮಾರು 8 ಗಂಟೆಗೆ ನಡೆದ ಈ ಘಟನೆಯು ಕೆಲಕಾಲ ಗ್ರಾಮದಲ್ಲಿ ಆತಂಕ ಸೃಷ್ಟಿಸಿತ್ತು.
ಎಮ್ಮೆಯನ್ನು ರಕ್ಷಿಸಿದ ಗ್ರಾಮಸ್ಥರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Next Story




