BELAGAVI | ಕುಟುಂಬದ ವಿರೋಧ ಹಿನ್ನೆಲೆ: ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದ ಪ್ರೇಮಿಗಳು

ಬೆಳಗಾವಿ: ಕುಟುಂಬಸ್ಥರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಎದುರು ವಿವಾಹವಾಗಿರುವ ಘಟನೆ ಶುಕ್ರವಾರ ಬೆಳಗಾವಿಯಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಬಸವರಾಜ ನಡುವಿನಮನಿ ಹಾಗೂ ಅಶ್ವಿನಿ ಮಾದರ ಈ ರೀತಿ ಸತಿಪತಿಗಳಾದ ಪ್ರೇಮಿಗಳು.
ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಬಸವರಾಜರ ಮನೆಯಲ್ಲಿ ಇವರ ವಿವಾಹಕ್ಕೆ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ, ತಮ್ಮ ಸಂಬಂಧಕ್ಕೆ ಕಾನೂನುಬದ್ಧ ರೂಪ ನೀಡಲು ಇಬ್ಬರೂ ನಿರ್ಧರಿಸಿದರು.
ಅದರಂತೆ ಯುವ ಕರ್ನಾಟಕ ಭೀಮಸೇನೆ ನೇತೃತ್ವದಲ್ಲಿ ಬೆಳಗಾವಿಯ ಅಂಬೇಡ್ಕರ್ ಪ್ರತಿಮೆ ಎದುರು ಸರಳ ಹಾಗೂ ಸಾಂಪ್ರದಾಯಿಕವಾಗಿ ವಿವಾಹ ನೆರವೇರಿತು.
ವಿವಾಹ ಸಮಾರಂಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದು ನವದಂಪತಿಗೆ ಶುಭಾಶಯ ಕೋರಿದರು.
Next Story







