Belagavi | ಮಳೆಗಾಗಿ ಮುನ್ಯಾಳದಲ್ಲಿ ಕತ್ತೆಗಳ ಮದುವೆ

ಬೆಳಗಾವಿ : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಉತ್ತಮ ಮಳೆಯಾಗಲೆಂದು ವಿವಿಧ ಗ್ರಾಮಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿದ್ದು, ಅದರ ಭಾಗವಾಗಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ರವಿವಾರ ಕತ್ತೆಗಳ ಮದುವೆಯನ್ನು ನೆರವೇರಿಸಲಾಯಿತು.
ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಈ ವಿಶಿಷ್ಟ ವಿವಾಹದಲ್ಲಿ ಗಂಡು ಕತ್ತೆಗೆ 'ಕಾಂತೇಶ' ಹಾಗೂ ಹೆಣ್ಣು ಕತ್ತೆಗೆ 'ಕಸ್ತೂರಿ' ಎಂದು ನಾಮಕರಣ ಮಾಡಲಾಗಿತ್ತು. ಅರಿಶಿನ ಶಾಸ್ತ್ರ, ನೂಲು ಸುತ್ತುವ ಕಾರ್ಯಕ್ರಮ ಸೇರಿದಂತೆ ಮನುಷ್ಯರ ವಿವಾಹದಲ್ಲಿ ನಡೆಯುವ ಎಲ್ಲ ಪ್ರಮುಖ ಶಾಸ್ತ್ರಗಳನ್ನು ಅನುಸರಿಸಿ ವಿವಾಹ ನೆರವೇರಿಸಲಾಯಿತು.
ರಬಕವಿಯಿಂದ ಕತ್ತೆಗಳನ್ನು ಗ್ರಾಮಕ್ಕೆ ಕರೆತರಲಾಗಿದ್ದು, ಬಾಸಿಂಗ, ಬಟ್ಟೆ, ತಾಳಿ ಸೇರಿದಂತೆ ವಿವಿಧ ಅಲಂಕಾರಗಳಿಂದ ಕತ್ತೆಗಳನ್ನು ವಧು-ವರರಂತೆ ಸಿಂಗರಿಸಲಾಗಿತ್ತು. ಬಳಿಕ ಮದುವೆ ನೆರವೇರಿಸಿ, ಜಾನಪದ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಕತ್ತೆಗಳಿಗೆ ಆರತಿ ಬೆಳಗಿ, ನಾಡಿನಾದ್ಯಂತ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರಿಗೆ ಅನ್ನ-ಸಾಂಬಾರ್ ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 20 ವರ್ಷಗಳ ಬಳಿಕ ಮುನ್ಯಾಳದಲ್ಲಿ ಈ ವಿಶಿಷ್ಟ ಆಚರಣೆ ಮರುಕಳಿಸಿದ್ದು, ಕಾರ್ಯಕ್ರಮಕ್ಕಾಗಿ ಗ್ರಾಮಸ್ಥರು ಸುಮಾರು 60 ಸಾವಿರ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ.






