Belagavi | ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಹಾಯಕನ ಮನೆ ಮೇಲೂ ಈಡಿ ದಾಳಿ; ದಾಖಲೆಗಳ ಪರಿಶೀಲನೆ

ಸಾಂದರ್ಭಿಕ ಚಿತ್ರ | Photo Credit : PTI
ಬೆಳಗಾವಿ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸಗಳು ಹಾಗೂ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ, ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ ಅವರ ಬೆಳಗಾವಿಯ ಕುಮಾರಸ್ವಾಮಿ ಲೇಔಟ್ನಲ್ಲಿರುವ ನಿವಾಸದ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಳಗ್ಗೆಯಿಂದಲೇ ಮಲಗೌಡ ಪಾಟೀಲ ಅವರ ನಿವಾಸದಲ್ಲಿದ್ದ ಈಡಿ ಅಧಿಕಾರಿಗಳ ತಂಡ ವಿವಿಧ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಸತೀಶ್ ಜಾರಕಿಹೊಳಿ ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಗೋಕಾಕ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಈಡಿ ಅಧಿಕಾರಿಗಳು ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದಾರೆ ಎಂಬುದು ತಮಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರು ರಾಜಕಾರಣದ ಜತೆಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಯಾವುದಾದರೂ ಮಾಹಿತಿ ಲಭ್ಯವಾಗಿರಬಹುದು. ಆ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿರಬಹುದು. ಅಧಿಕಾರಿಗಳು ಯಾವುದೇ ದಾಖಲೆಗಳು ಅಥವಾ ಮಾಹಿತಿಯನ್ನು ಕೇಳಿದರೂ ಸತೀಶ್ ಜಾರಕಿಹೊಳಿ ಅವರು ಅವುಗಳನ್ನು ಒದಗಿಸಲಿದ್ದಾರೆ ಎಂದು ಲಖನ್ ಜಾರಕಿಹೊಳಿ ತಿಳಿಸಿದರು.
ಈಡಿ ಅಧಿಕಾರಿಗಳು ನೋಟಿಸ್ ನೀಡಿದರೆ ಅದಕ್ಕೆ ಸತೀಶ್ ಜಾರಕಿಹೊಳಿ ಅವರು ಸೂಕ್ತವಾಗಿ ಉತ್ತರಿಸಲಿದ್ದಾರೆ. ಅಧಿಕಾರಿಗಳಿಗೆ ತನಿಖೆಗೆ ಅಗತ್ಯವಿರುವ ಮಾಹಿತಿಯನ್ನು ನೀಡುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.
ವಿದೇಶದಲ್ಲಿ ಹೂಡಿಕೆ ಮಾಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಖನ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರು ಯಾರೊಂದಿಗೆ ವ್ಯವಹಾರ ನಡೆಸಿದ್ದಾರೆ ಅಥವಾ ಯಾವ ರೀತಿಯ ಬಿಸಿನೆಸ್ ಮಾಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ. ಅವರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಈಡಿ ಅಧಿಕಾರಿಗಳಿಗೆ ಯಾವುದಾದರೂ ಮಾಹಿತಿ ಲಭ್ಯವಾಗಿರಬಹುದು ಎಂದು ಹೇಳಿದರು.
ಈಗಾಗಲೇ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ, ಗೋಕಾಕ್ನಲ್ಲಿರುವ ಹಿಲ್ ಗಾರ್ಡನ್ ನಿವಾಸ, ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸ್ಥಳಗಳು ಹಾಗೂ ಆಪ್ತರ ನಿವಾಸಗಳ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಆಪ್ತ ಸಹಾಯಕ ಮಲಗೌಡ ಪಾಟೀಲ ಅವರ ಮನೆ ಮೇಲೂ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ.
ವಿದೇಶಿ ಹೂಡಿಕೆ, ಹಣ ವರ್ಗಾವಣೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಈಡಿ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.






