Belagavi | ದಿಲ್ಲಿ ಹೈಕೋರ್ಟ್ ಹೆಸರಿನಲ್ಲಿ ವಂಚನೆ: 15 ಲಕ್ಷ ರೂ. ಕಳೆದುಕೊಂಡ ವೃದ್ಧೆ

ಸಾಂದರ್ಭಿಕ ಚಿತ್ರ (AI)
ಬೆಳಗಾವಿ: ದಿಲ್ಲಿ ಹೈಕೋರ್ಟ್ ವಿಚಾರಣೆ ಹೆಸರಿನಲ್ಲಿ 83 ವರ್ಷದ ವೃದ್ಧೆಯೊಬ್ಬರನ್ನು ಬೆದರಿಸಿ, ಸುಮಾರು ಹತ್ತು ದಿನಗಳ ಕಾಲ ವಿಡಿಯೊ ಕರೆ ಮೂಲಕ ನಿಗಾದಲ್ಲಿರಿಸಿ 15 ಲಕ್ಷ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ನಗರದ ಭಾಗ್ಯನಗರ ನಿವಾಸಿ ವಿಜಯಾ ಉಪ್ಪಿನ (83) ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಗಳು ವಿಜಯಾ ಉಪ್ಪಿನ ಅವರಿಗೆ ಕರೆ ಮಾಡಿ ತಾವು ದಿಲ್ಲಿ ಹೈಕೋರ್ಟ್ನ ನ್ಯಾಯಾಧೀಶರು ಹಾಗೂ ತನಿಖಾ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಸಹಕರಿಸಬೇಕೆಂದು ಹೇಳಿ ಮಾನಸಿಕ ಒತ್ತಡ ಸೃಷ್ಟಿಸಿದ್ದಾರೆ.
ನಂತರ ಸುಮಾರು ಹತ್ತು ದಿನಗಳ ಕಾಲ ನಿರಂತರ ವಿಡಿಯೊ ಕರೆ ಮೂಲಕ ಸಂಪರ್ಕದಲ್ಲಿರಿಸಿಕೊಂಡ ಆರೋಪಿಗಳು, ವೃದ್ಧೆಯ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸುತ್ತಿದ್ದರು. ಇದೇ ವೇಳೆ ಬ್ಯಾಂಕ್ ಖಾತೆಗಳ ವಿವರ, ಸ್ಥಿರ ಠೇವಣಿ (ಎಫ್ಡಿ), ಉಳಿತಾಯ ಖಾತೆಗಳು ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ವಿಚಾರಣೆ ನೆಪದಲ್ಲಿ ಭಯ ಹುಟ್ಟಿಸಿದ ವಂಚಕರು, ಬ್ಯಾಂಕ್ನಲ್ಲಿದ್ದ ಸ್ಥಿರ ಠೇವಣಿಗಳನ್ನು ತಕ್ಷಣ ಮುರಿದು ಹಣವನ್ನು ಸುರಕ್ಷತಾ ಪರಿಶೀಲನೆಗಾಗಿ ವರ್ಗಾಯಿಸಬೇಕೆಂದು ನಂಬಿಸಿದ್ದಾರೆ. ಅವರ ಮಾತುಗಳನ್ನು ನಂಬಿದ ವಿಜಯಾ ಉಪ್ಪಿನ ಅವರು ಬ್ಯಾಂಕ್ನಲ್ಲಿದ್ದ ಠೇವಣಿಗಳನ್ನು ಮುರಿದು, ಕಳೆದ ಎಪ್ರಿಲ್ 9ರಂದು ಒಟ್ಟು 15 ಲಕ್ಷ ರೂಪಾಯಿಯನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.
ಹಣ ವರ್ಗಾವಣೆಯಾದ ಬಳಿಕವೂ ಕೆಲ ದಿನಗಳ ಕಾಲ ಸಂಪರ್ಕದಲ್ಲಿದ್ದ ಆರೋಪಿಗಳು, ನಂತರ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ, ವೃದ್ಧೆ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ನಗರ ಸೈಬರ್ ಅಪರಾಧ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ವಂಚಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.






