Belagavi | ವಿದ್ಯುತ್ ಅವಘಡ: ಇಬ್ಬರು ಕಾರ್ಮಿಕರು ಮೃತ್ಯು

ಬೆಳಗಾವಿ : ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯ ಸಮೀಪದ ಗೊರವನಕೊಳ್ಳ–ವಟ್ನಾಳ ಹದ್ದಿಯಲ್ಲಿ ಎಂ-ಸ್ಯಾಂಡ್ ಗಣಿಗಾರಿಕೆ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಕಾರ್ಮಿಕರು ಮಂಗಳವಾರ ಮೃತಪಟ್ಟಿದ್ದಾರೆ.
ಮೃತರನ್ನು ಜಾರ್ಖಂಡ್ ರಾಜ್ಯದ ಹಜಾರಿಭಾಗ ಜಿಲ್ಲೆಯ ಪಂಟುರಕಿಯ ನಿವಾಸಿಗಳಾದ ಹಿಟಾಚಿ ಆಪರೇಟರ್ ರವಿಕುಮಾರಸಿಂಗ್ ದುಪಾಲಸಿಂಗ್ ಸಿಂಗ್ (18) ಹಾಗೂ ಸಹಾಯಕ ಸುಭಾಕುಮಾರ ರೂಪನಸಿಂಗ್ (18) ಎಂದು ಗುರುತಿಸಲಾಗಿದೆ.
11 ಕೆವಿ ವಿದ್ಯುತ್ ಸಂಪರ್ಕದ ಸಮೀಪ ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರದ ಬಕೆಟ್ ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಹರಿದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ತಗುಲುತ್ತಿದ್ದಂತೆಯೇ ಪ್ರಾಣ ಉಳಿಸಿಕೊಳ್ಳಲು ಇಬ್ಬರು ಹಿಟಾಚಿಯಿಂದ ಕೆಳಗೆ ಜಿಗಿದಾಗ ಹತ್ತಿರದಲ್ಲಿದ್ದ ನೀರಿನ ಗುಂಡಿಯಲ್ಲಿ ಬಿದ್ದಿದ್ದಾರೆ. ಆದರೆ ನೀರಿನಲ್ಲೂ ವಿದ್ಯುತ್ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.




