ಬೆಳಗಾವಿ | ಪರ್ಯಾಯ ರಸ್ತೆಗೂ ವ್ಯಾಪಿಸಿದ ರೈತರ ಪ್ರತಿಭಟನೆ; ವಾಹನ ತಡೆದು ಆಕ್ರೋಶ

ಬೆಳಗಾವಿ: ಜಿಲ್ಲೆಯ ಹಿರೇ ಬಾಗೇವಾಡಿ ಟೋಲ್ಗೇಟ್ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕಾವು ಇದೀಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದರೂ, ಆ ಮಾರ್ಗಗಳಲ್ಲಿಯೂ ರೈತರ ಪ್ರತಿಭಟನೆ ಮುಂದುವರಿದಿದೆ.
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರು ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಹಲವು ವಾಹನಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ದೃಶ್ಯಗಳು ಕಂಡುಬಂದಿವೆ.
“ರೈತರೆಂದರೆ ಎಲ್ಲರೂ ಒಂದೇ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವು ಯಾವುದೇ ಸ್ಥಳದಲ್ಲಾದರೂ ಪ್ರತಿಭಟನೆ ನಡೆಸುತ್ತೇವೆ. ನಮಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು,” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಹಿರೇ ಬಾಗೇವಾಡಿ ಟೋಲ್ಗೇಟ್ ಸಮೀಪ ಆರಂಭವಾದ ಪ್ರತಿಭಟನೆ ಇದೀಗ ಪರ್ಯಾಯ ರಸ್ತೆ ಮಾರ್ಗಗಳಿಗೂ ವ್ಯಾಪಿಸಿರುವುದರಿಂದ ವಾಹನ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.






