Belagavi| ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಮಾದಕ ವಸ್ತುಗಳೊಂದಿಗೆ ವ್ಯಕ್ತಿ ಬಂಧನ

ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ಮಾದಕ ವಸ್ತುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಜ್ವಲ್ ನಗರದ ನಿವಾಸಿ ಅಬ್ದುಲ್ ಬೇಪಾರಿ ಬಂಧಿತ ಆರೋಪಿ. ತನ್ನ ಪತ್ನಿಗೆ ಹೆರಿಗೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಈತ, ಪ್ರವೇಶ ದ್ವಾರದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ಸಿಬ್ಬಂದಿ ಕಲ್ಮೇಶ ಹುಕಳಿ ಅವರು ಆರೋಪಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ತಪಾಸಣೆ ವೇಳೆ ಆರೋಪಿಯ ಜೇಬು ಹಾಗೂ ಬಟ್ಟೆಗಳಲ್ಲಿ ಅಡಗಿಸಿಟ್ಟಿದ್ದ ಒಂದು ಪ್ಯಾಕೆಟ್ ಗಾಂಜಾ ಮತ್ತು 30ಕ್ಕೂ ಹೆಚ್ಚು ಚರಸ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಕೂಡಲೇ ಗೃಹರಕ್ಷಕ ಸಿಬ್ಬಂದಿ ಎಪಿಎಂಸಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಮಾದಕ ವಸ್ತುಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಮಾದಕ ವಸ್ತುಗಳು ಎಲ್ಲಿಂದ ದೊರೆತವು ಹಾಗೂ ಅವುಗಳನ್ನು ಯಾರಿಗೆ ಪೂರೈಸಲು ತಂದಿದ್ದ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







