BELAGAVI | ಸವದತ್ತಿ: ರಸ್ತೆ ಮಧ್ಯೆ ವ್ಯಕ್ತಿಯ ಬರ್ಬರ ಹತ್ಯೆ

ಬೆಳಗಾವಿ: ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸಮೀಪ ಸೋಮವಾರ ಸಂಜೆ ನಡೆದಿದೆ.
ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದವರು. ಕೊಲೆ ಆರೋಪಿ ಈರಯ್ಯ ಮಠಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಸಪ್ಪರನ್ನು ಆರೋಪಿ ಈರಯ್ಯ ತಡೆದು ಮಚ್ಚಿನಿಂದ ಸುಮಾರು 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಆರೋಪಿಯು ಮೃತದೇಹದ ಮೇಲೆ ಕಾಲಿಟ್ಟು ನಿಂತು ಅಟ್ಟಹಾಸ ಮೆರೆದಿರುವ ವೀಡಿಯೊ ವೈರಲ್ ಆಗಿದೆ. ನಂತರ ಆರೋಪಿ ಈರಯ್ಯ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಈರಯ್ಯನ ತಾಯಿಯೊಂದಿಗೆ ಬಸಪ್ಪ,ಊರು ಬಿಟ್ಟು ಹೋಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಬಸಪ್ಪನ ವಿರುದ್ಧ ದ್ವೇಷ ಹೊಂದಿದ್ದನೆನ್ನಲಾಗಿದೆ. ಇತ್ತೀಚೆಗೆ ಬಸಪ್ಪ ಮರಳಿ ಗ್ರಾಮಕ್ಕೆ ಬಂದಿದ್ದರಿಂದ ಹಳೆಯ ವೈಷಮ್ಯ ತೀವ್ರಗೊಂಡು ಈ ಆತ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





