Belagavi | ವಾಟ್ಸ್ಆ್ಯಪ್ ಸ್ಟೇಟಸ್ ವಿಚಾರಕ್ಕೆ ವ್ಯಕ್ತಿಯ ಬರ್ಬರ ಹತ್ಯೆ; ದಂಪತಿ ಪೊಲೀಸ್ ಠಾಣೆಗೆ ಶರಣು

ಸಾಂದರ್ಭಿಕ ಚಿತ್ರ
ಬೆಳಗಾವಿ: ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ರಮೇಶ ಹಣಮಂತ ಬಂಡ್ರೋಳಿ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಬಣಪ್ಪ ಒಡೆಯರ (33) ಹಾಗೂ ಆಕೆಯ ಪತಿ ಬಣಪ್ಪ ರಾಮಚಂದ್ರ ಒಡೆಯರ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾನು ಲಕ್ಷ್ಮೀ ಜೊತೆಗಿರುವ ಫೋಟೋವನ್ನು ರಮೇಶ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿದ್ದ ಎನ್ನಲಾಗಿದೆ. ಈ ಸ್ಟೇಟಸ್ ಗಮನಿಸಿದ ಬಳಿಕ ಬಣಪ್ಪ ಹಾಗೂ ಲಕ್ಷ್ಮೀ ಸೇರಿ ಮನೆಯ ಹಿಂಭಾಗದ ಗದ್ದೆಯಲ್ಲಿ ರಮೇಶನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹತ್ಯೆ ನಡೆಸಿದ ಬಳಿಕ, ತಾವೇ ಕೊಲೆ ಮಾಡಿರುವುದಾಗಿ ತಿಳಿಸಿ ದಂಪತಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ರಮೇಶ ಆರೋಪಿಗಳ ಜಮೀನನ್ನು ಉಳುಮೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ಕೊಲೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೊಲೆಗೆ ನಿಖರ ಕಾರಣ, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಗಳ ಪಾತ್ರದ ಕುರಿತು ಘಟಪ್ರಭಾ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.






