Belagavi | ಚರಂಡಿ ನೀರಿನ ವಿವಾದಕ್ಕೆ ಬಲಿಯಾದ ವ್ಯಕ್ತಿ: ಪಿಕಾಸಿಯಿಂದ ಹಲ್ಲೆ ನಡೆಸಿ ಕೊಲೆ

ಸಾಂದರ್ಭಿಕ ಚಿತ್ರ | PC : AI
ಬೆಳಗಾವಿ : ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ತಾಲೂಕಿನ ತೋಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಅಮೀರ್ ಹುಸೇನ್ ಪಾಶ್ಚಾಪುರ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಅಶೋಕ ರಾಮಾ ಉಗರಖೋಡ (28) ಎಂಬಾತನನ್ನು ನಂದಗಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಮಂಗಳವಾರ ಬೆಳಿಗ್ಗೆ ಇದೇ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ.
ಜಗಳದ ವೇಳೆ ಆರೋಪಿ ಅಶೋಕ್, ಕೈಗೆ ಸಿಕ್ಕ ಪಿಕಾಸಿಯಿಂದ ಅಮೀರ್ ಹುಸೇನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೀವ್ರವಾಗಿ ಗಾಯಗೊಂಡ ಅಮೀರ್ ಹುಸೇನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಂದಗಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






