ಬೆಳಗಾವಿ | ಡಿ.11ರ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಪೊಲೀಸ್ ಅನುಮತಿ ನಿರಾಕರಣೆ

ಬೆಳಗಾವಿ: ನಗರದಲ್ಲಿ ಡಿ.11ರಂದು ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಅಕ್ಸಾ) ನೇತೃತ್ವದಲ್ಲಿ ನಡೆಸಲುದ್ದೇಶಿಸಿದ್ದ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಅಕ್ಸಾ ಸಂಸ್ಥೆಯಿಂದ ಬುಧವಾರ ಪ್ರತಿಭಟನೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕಾನೂನು–ಸುವ್ಯವಸ್ಥೆಯ ಹಿನ್ನಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಧಾರವಾಡ ಅಕ್ಸಾ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದರಿಂದ ಇಂಟಲಿಜೆನ್ಸ್ ವರದಿ ಆಧಾರವಾಗಿ ಬೆಳಗಾವಿಯಲ್ಲಿ ಅನುಮತಿ ನೀಡಿಲ್ಲ. ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ, ಕಾನೂನು–ಸುವ್ಯವಸ್ಥೆ ಕಾಪಾಡುವುದು ಮುಖ್ಯ ಎಂದು ಪೊಲೀಸರು ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗಬಾರದೆಂದು ಪ್ರತಿಭಟನೆಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ..





