Belagavi | ಆಸ್ತಿ ವಿವಾದ; ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ-ಮಗಳ ಭೀಕರ ಹತ್ಯೆ

ರುದ್ರಪ್ಪ ಕುಂದರಗಿ/ ಶಶಿಕಲಾ
ಬೆಳಗಾವಿ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಅವರಾದಿ ಗ್ರಾಮದ ನಿವಾಸಿ, ಮಾಜಿ ಸೈನಿಕ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ ಹತ್ಯೆಗೀಡಾದವರು. ದಾಳಿಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರುದ್ರಪ್ಪ ಕುಂದರಗಿ ಕುಟುಂಬದಲ್ಲಿ ಹಲವು ದಿನಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ವಿವಾದ ನಡೆಯುತ್ತಿತ್ತು. ಈ ಸಂಬಂಧ ಮಾತುಕತೆ ಹಾಗೂ ಕಾಗದಪತ್ರಗಳ ಪರಿಶೀಲನೆಗಾಗಿ ರುದ್ರಪ್ಪ ಹಾಗೂ ಶಶಿಕಲಾ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ರುದ್ರಪ್ಪ ಅವರ ಇಬ್ಬರು ಸಹೋದರರು ಹಾಗೂ ಸಹೋದರನ ಪುತ್ರ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕಣ್ಣೆದುರೇ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ರುದ್ರಪ್ಪ ಹಾಗೂ ಶಶಿಕಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಭರತ್ ಎಸ್. ಗಂಗಾಧರ ಹಂಪಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ತನಿಖೆ ಚುರುಕುಗೊಳಿಸಿದ್ದಾರೆ.






