Belagavi | ಆರ್‌ಬಿಐ ನಿಯಮ ಉಲ್ಲಂಘನೆ ಆರೋಪ : ಶಿವಂ ಅಸೋಸಿಯೇಟ್ಸ್ ಮಾಲಕ ಶಿವಾನಂದ ನೀಲಣ್ಣವರ ವಶಕ್ಕೆ

ಬೆಳಗಾವಿ : ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಜನರಿಂದ ಠೇವಣಿ ಸಂಗ್ರಹಿಸಿ ಅನಧಿಕೃತ ಬಡ್ಡಿ ವ್ಯವಹಾರ ನಡೆಸಿದ ಆರೋಪದಡಿ ಶಿವಂ ಅಸೋಸಿಯೇಟ್ಸ್ ಮಾಲಕ ಶಿವಾನಂದ ನೀಲಣ್ಣವರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಈ ಕುರಿತು ಮಾಹಿತಿ ನೀಡಿ, ಪ್ರಾಥಮಿಕ ತನಿಖೆಯಲ್ಲಿ ಸುಮಾರು 35 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆದಿರುವ ಶಂಕೆ ಇದ್ದರೂ, ಆ ವ್ಯವಹಾರಗಳು ಆರ್‌ಬಿಐ ನಿಯಮಾನುಸಾರ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆ ಹಾಗೂ ಪೊಲೀಸರ ತಂಡ ಶಿವಾನಂದ ಅವರ ಮನೆ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಕಳೆದ ಎರಡು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಹಣ ವರ್ಗಾವಣೆ ಹಾಗೂ ಹೂಡಿಕೆ ವ್ಯವಹಾರಕ್ಕೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ.
ಪೊಲೀಸರು ಶುಕ್ರವಾರ ರಾತ್ರಿ ಎಫ್‌ಐಆರ್ ದಾಖಲಿಸಿ ಶಿವಾನಂದ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಅನುಮಾನವೂ ವ್ಯಕ್ತವಾಗಿದೆ.
ವಿವಾದಕ್ಕೆ ಕಾರಣವಾದ ಹೇಳಿಕೆ :
ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಾನಂದ ನೀಲಣ್ಣವರ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ನಾನು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರುವುದಿಲ್ಲ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಾದರೆ 2028ಕ್ಕೆ ಸಿಎಂ ಆಗಿ ತೋರಿಸುತ್ತೇನೆ ಎಂದು ಹೇಳಿಕೊಂಡಿದ್ದರೆಂದು ತಿಳಿದುಬಂದಿದೆ.
ಮೇ 17ರಂದು ಬೆಳಗಾವಿಯಲ್ಲಿ 20 ಸಾವಿರ ಜನರನ್ನು ಸೇರಿಸಿ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಗರಾದ್ಯಂತ ಕಟೌಟ್ ಹಾಗೂ ಪೋಸ್ಟರ್‌ಗಳನ್ನು ಅಳವಡಿಸಲಾಗಿತ್ತು. ದಾಳಿ ನಂತರ ಪಾಲಿಕೆ ಅಧಿಕಾರಿಗಳು ಕಾರ್ಯಕ್ರಮ ರದ್ದುಪಡಿಸಿ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ.
ಯಾರು ಈ ಶಿವಾನಂದ ನೀಲಣ್ಣವರ? :
ಶಿವಾನಂದ ನೀಲಣ್ಣವರ ಅವರು ಮೂಲತಃ ಹುಬ್ಬಳ್ಳಿಯ ಉಣಕಲ್ ನಿವಾಸಿಗಳು. ಆರಂಭದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದ ಅವರು ಬಳಿಕ ಆಟೋದಲ್ಲಿ ಐಸ್‌ಕ್ರೀಮ್ ಮಾರಾಟ ಮಾಡುತ್ತಿದ್ದರು. ನಂತರ ಐಸ್‌ಕ್ರೀಮ್ ಕಾರ್ಖಾನೆ ಆರಂಭಿಸಿ, 2012ರ ಬಳಿಕ “ಶಿವಂ ಅಸೋಸಿಯೇಟ್ಸ್” ಹೆಸರಿನಲ್ಲಿ ಹೂಡಿಕೆ ವ್ಯವಹಾರ ಆರಂಭಿಸಿದ್ದರು.
‘ಅಕ್ಯೂಮೆನ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿ ಅದರ ಮೂಲಕ ಜನರಿಂದ ಹೂಡಿಕೆ ಸಂಗ್ರಹಿಸಲಾಗುತ್ತಿತ್ತು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ನಡೆದಿರುವ ಶಂಕೆ ವ್ಯಕ್ತವಾಗಿದೆ.






