ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ)ವಿಧೇಯಕ-2025 : ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ

ಬೆಳಗಾವಿ : ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರಕಿತು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ಗುರುವಾರದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇಪ್ಪನವರು ಸಭೆಯ ಅಂಗೀಕಾರ ಕೋರಿ ವಿಧೇಯಕವನ್ನು ಪರ್ಯಾಲೋಚನೆಗೆ ತಂದರು.
ಅಸಂವಿಧಾನಿಕ ಆಚರಣೆಗಳಾದ ಜಾತಿ ಪಂಚಾಯಿತಿಗಳು ಹೇರುವ ಸಾಮಾಜಿಕ ಬಹಿಷ್ಕಾರ, ಕಿರುಕುಳ, ವಿವಿಧ ರೀತಿಯ ಶಿಕ್ಷೆಗಳನ್ನು ತಡೆಗಟ್ಟಿ ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡುವುದಕ್ಕಾಗಿ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025ನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ವಿಧೇಯಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಸಹ ಸಮ್ಮತಿ ಸೂಚಿಸಿ ಬೆಂಬಲ ನೀಡಿ ಮಾತನಾಡಿದರು. ಈ ವೇಳೆ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ವಿಧೇಯಕದ 12ನೇ ವಿಧಿಯಲ್ಲಿ ಸಂತ್ರಸ್ತ ಅಥವಾ ಆತನ ಕುಟುಂಬದ ಸದಸ್ಯರು ಪೊಲೀಸರಿಗೆ ಅಥವಾ ನೇರವಾಗಿ ಪ್ರಥಮ ದರ್ಜೆ ನಾಯಿಕ ಮ್ಯಾಜಿಸ್ಟ್ರೇಟರಿಗೆ ದೂರು ದಾಖಲಿಸಬೇಕು ಅವಕಾಶ ನೀಡಲಾಗಿದೆ. ವಿಧೇಯಕದ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಪೊಲೀಸರು ಸಹ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ವಿಧೇಯಕದಲ್ಲಿ ಅವಕಾಶ ನೀಡಿ ತಿದ್ದುಪಡಿ ತರುವಂತೆ ಸಚಿವ ಹೆಚ್.ಸಿ.ಮಹಾದೇವಪ್ಪನವರಲ್ಲಿ ಕೋರಿದರು.
ಅಂತಿಮವಾಗಿ ಪೊಲೀಸರಿಗೆ ಸ್ವಯಂ ಪ್ರೇರಿತ ದೂರು ದಾಖಲಿಸಲು ಅಧಿಕಾರ ನೀಡುವ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಸರ್ವಾನುಮತ ಅಂಗೀಕಾರ ದೊರಕಿತು.







