ಗದ್ದಲಕ್ಕೆ ಕಾರಣವಾದ ‘ಗೃಹಲಕ್ಷ್ಮೀ’ ಹಣ ಬಿಡುಗಡೆ ವಿಚಾರ | ಬಿಜೆಪಿ ಸಭಾತ್ಯಾಗ: ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ‘ಗೃಹಲಕ್ಷ್ಮೀ ಯೋಜನೆ’ಯ ಹಣ ಬಿಡುಗಡೆ ಸಂಬಂಧ ಸದನಕ್ಕೆ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆಂಬ ವಿಚಾರವು ಆಡಳಿತ-ಪ್ರ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ, ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು. ಆ ಬಳಿಕ ಸದನಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಪಕ್ಷ ಸದಸ್ಯರ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ ಪ್ರಸಂಗವು ನಡೆಯಿತು.
ಬುಧವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್, ಮೂರು ದಿನಗಳಿಂದ ಸಚಿವರು ಸದನಕ್ಕೆ ಬಂದಿಲ್ಲ, ನಮ್ಮ ಪ್ರಸ್ತಾಪಕ್ಕೆ ಉತ್ತರವನ್ನು ನೀಡಿಲ್ಲ. ಕೂಡಲೇ ಅವರನ್ನು ಸದನಕ್ಕೆ ಕರೆಸಿ ಉತ್ತರ ಕೊಡಿಸಬೇಕು. ಅಲ್ಲದೆ, ತಪ್ಪು ಉತ್ತರ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದ ಜನತೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರು, ಈಗಾಗಲೇ ಸಿಎಂ ಉತ್ತರ ನೀಡಿದ್ದು, ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಪಟ್ಟುಹಿಡಿದರು.
ಈ ಗದ್ದಲದ ಹಿನ್ನಲೆಯಲ್ಲಿ ಸ್ಪೀಕರ್ ಖಾದರ್ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು. ಬಿಜೆಪಿ-ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅನಂತರ ಕಲಾಪ ಸೇರಿದ ಕೂಡಲೇ ಸಚಿವರ ಉತ್ತರ ಮತ್ತು ಕ್ಷಮೆಯಾಚನೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರಿಸಿದರು. ಸ್ಪೀಕರ್ ಖಾದರ್, ವಿಪಕ್ಷ ಸದಸ್ಯರು ತಮ್ಮ ಆಸನಗಳಿಗೆ ತೆರಳಲು ಮನವಿ ಮಾಡಿದರು. ಸ್ಪೀಕರ್ ಮನವಿಗೆ ಸ್ಪಂದಿಸಿದ ವಿಪಕ್ಷ ಸದಸ್ಯರು, ಧರಣಿ ವಾಪಸ್ ಪಡೆದರು.
ವಿಷಾದ ವ್ಯಕ್ತಪಡಿಸುವೆ: ಬಳಿಕ ಉತ್ತರ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಂದಿಲ್ಲ ಎಂದು ಬಿಜೆಪಿಯ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. ಆದರೆ, ರಾಜ್ಯದ 1.26ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಟ್ಟು 52,416 ಕೋಟಿ ರೂ.ಗಳನ್ನು, ಒಟ್ಟು 23 ಕಂತುಗಳಲ್ಲಿ ಪ್ರತಿಮನೆಗೆ ಈವರೆಗೆ 46 ಸಾವಿರ ರೂ.ಗಳನ್ನು ಪಾತಿಸಲಾಗಿದೆ. ಆಗಸ್ಟ್ ತಿಂಗಳ ವರೆಗೆ ಹಣ ಪಾವತಿಸಲಾಗಿದೆ ಎಂದರು.
ನಾನು ಮೊದಲ ಬಾರಿಗೆ ಸಚಿವೆಯಾಗಿ ಪೂಜ್ಯ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಅಧಿಕಾರಿಗಳನ್ನು ವಿಚಾರಣೆ ಮಾಡಿದಾಗ 2 ತಿಂಗಳ ಹಣ ಪಾವತಿ ಆಗಿಲ್ಲ ಎಂದು ಗೊತ್ತಾಗಿದೆ. ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶವಿರಲಿಲ್ಲ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಹಣ ಪಾವತಿಸಲಾಗುವುದು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ ನೀಡಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಸಚಿವರು ಕ್ಷಮೆ ಕೇಳಿಲ್ಲ. ಸದನಕ್ಕೆ ತಪ್ಪು ಉತ್ತರ ನೀಡಿದ್ದು, ಕ್ಷಮೆ ಕೇಳಿದರೆ ಸಣ್ಣವರಾಗುತ್ತಾರಾ? ಪ್ರಶ್ನಿಸಿದರು
ಇದಕ್ಕೆ ಧ್ವನಿಗೂಡಿಸಿದ ಆರಗ ಜ್ಞಾನೇಂದ್ರ, ‘ಇಲಾಖೆ ಅಧಿಕಾರಿಗಳಿಗೆ ಹಣ ಪಾವತಿ ಮಾಡದೆ ಇರುವುದು ಗೊತ್ತಿಲ್ಲವೇ? ಅಧಿಕಾರಿಗಳು ಸಚಿವರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಅವರಿಗೆ ಶಿಕ್ಷೆ ಇಲ್ಲವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಬೈರತಿ ಸುರೇಶ್, ‘ರಾಜ್ಯದ ಜನರಿಗೆ ಒಂದು ರೂಪಾಯಿಯನ್ನು ಬಿಜೆಪಿಯವರು ನೀಡಿಲ್ಲ. ಬಡ ಜನರಿಗೆ ಒಂದು ಕೆಜಿ ಅಕ್ಕಿಯನ್ನು ಕೊಟ್ಟಿಲ್ಲ. ಇವರು ನಮಗೆ ಬುದ್ಧಿಹೇಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಹಣ ನೀಡುತ್ತೇವೆಂದು ಘೋಷಣೆ ಮಾಡಿ ಬಿಡಿಗಾಸು ಹಣವನ್ನು ನೀಡಲಿಲ್ಲ. ನರೇಗಾ, ಜಲಜೀವನ್ ಮಿಷನ್ ಸೇರಿದಂತೆ ಇನ್ನಿತರ ಯೋಜನೆಗಳ ಹಣವನ್ನು ಬಿಡುಗಡೆ ಮಾಡಿಲ್ಲ. ಹಾಗೆಂದು ಕೇಂದ್ರದ ಬಿಜೆಪಿ ಸರಕಾರ ದಿವಾಳಿಯಾಗಿದೆ ಎಂದು ಹೇಳಲು ಆಗುತ್ತದೆಯೇ?. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಪಕ್ಷ ಸದಸ್ಯರ ಕಾಲೆಳೆದರು.
ಆದರೂ ವಿಪಕ್ಷ ಸದಸ್ಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಎರಡು ತಿಂಗಳ ಹಣ ನೀಡದೆ ಈ ಸರಕಾರ ಮೋಸ ಮಾಡಿದ್ದು, ಜನತೆ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮಹಿಳೆ ಎಂಬ ಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಪಕ್ಷ ಸದಸ್ಯರು ಮುಗಿಬೀಳುವುದು ಸರಿಯಲ್ಲ ಎಂದು ಟೀಕಿಸಿದರು.
ಬಳಿಕ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ‘ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ವಿಪಕ್ಷ ಸದಸ್ಯರಿಗೆ ಇದು ಸಾಕಾಗಿಲ್ಲದಿದ್ದರೆ ಕ್ಷಮೆಯನ್ನು ಕೇಳುತ್ತೇನೆ. ಆದರೆ, ನಾನು ಮಹಿಳೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ, ನೀವು ಇದು ಏನು ಸಂದೇಶ ನೀಡುತ್ತೀರಿ?’ ಎಂದು ಪ್ರಶ್ನಿಸಿದರು. ಬಳಿಕ ಸ್ಪೀಕರ್ ಖಾದರ್ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆ, ವಿಪಕ್ಷ ನಾಯಕ ಆರ್.ಅಶೋಕ್, ‘ಸಚಿವರ ಉತ್ತರವನ್ನು ವಿರೋಧಿಸಿ ಸಭಾತ್ಯಾಗ’ ಮಾಡುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಅವರನ್ನು ಅನುಸರಿಸಿ ಸದನದಿಂದ ಹೊರ ನಡೆದರು.







