Belagavi | ವಿಮಾ ಹಣಕ್ಕಾಗಿ ಪತಿಯ ಹತ್ಯೆ: ಪತ್ನಿ ಸಹಿತ 9 ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಳಗಾವಿ: 2 ಕೋಟಿ ರೂ. ವಿಮಾ ಹಣ ಪಡೆಯುವ ಉದ್ದೇಶದಿಂದ ಪತಿಯನ್ನು ಹತ್ಯೆ ಮಾಡಿ, ಬಳಿಕ ಸಾಕ್ಷ್ಯ ನಾಶಪಡಿಸಲು ಎಫ್ಎಸ್ಎಲ್ ವರದಿಯನ್ನೇ ತಿರುಚಿದ ಪ್ರಕರಣವನ್ನು ಯಮಕನಮರಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೃತನ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ ಕಲಗೌಡ ಮಂಜರಗಿ (46) ಕೊಲೆಯಾದವರು. ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್ಗಳ ಮೂಲಕ ಸುಮಾರು 2 ಕೋಟಿ ರೂ. ಮೌಲ್ಯದ ವಿಮೆ ಮಾಡಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ವಿಮಾ ಮೊತ್ತ ದೊರೆಯುತ್ತದೆ ಎಂಬ ದುರಾಸೆಯಿಂದ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಡೊಂಬರ್ ಸೇರಿದಂತೆ ಇತರರು ಸಂಚು ರೂಪಿಸಿ ಕೊಲೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರಲ್ಲಿ ಸುಮಾ ಮಂಜರಗಿ, ಪುಂಡಲೀಕ ಡೊಂಬರ್, ಆರ್ಎಂಪಿ ವೈದ್ಯ ಬಸವರಾಜ ಭಸ್ಮೆ, ಎಫ್ಡಿಎ ಅಶೋಕ ಗುಜನಾಳ, ಎಫ್ಎಸ್ಎಲ್ ಗುಮಾಸ್ತ ಅಪ್ಪಾಸಾಹೇಬ ನಾಯಿಕ, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಅಡವಿಸ್ವಾಮಿಮಠ, ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ, ಸಚಿನ್ ಸೇಲಾರ ಹಾಗೂ ರಾಹುಲ್ ಜೋಗಿ ಸೇರಿದ್ದಾರೆ.
ಮಾರ್ಚ್ 13ರಂದು ಬೈಕ್ನಿಂದ ಬಿದ್ದು ಗಾಯಗೊಂಡಿದ್ದ ಸಂದೀಪ ಅವರನ್ನು ಮೊದಲು ಹುಕ್ಕೇರಿ ಆಸ್ಪತ್ರೆ ಹಾಗೂ ಬಳಿಕ ಘಟಪ್ರಭಾದ ಜೆ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಸಲೈನ್ ಬಾಟಲಿಗೆ ವಿಷ ಬೆರೆಸಿ ಹಾಗೂ ನಿದ್ದೆ ಮಾತ್ರೆ ನೀಡಿ ಮಾರ್ಚ್ 15ರಂದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತೋರಿಸಲು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಲ್ಲದೆ ಮರಣೋತ್ತರ ಪರೀಕ್ಷೆ ಮತ್ತು ಎಫ್ಎಸ್ಎಲ್ ವರದಿಯಲ್ಲಿ ವಿಷದ ಅಂಶ ಪತ್ತೆಯಾಗದಂತೆ ಮಾಡಲು ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರ ಪಡೆಯಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಅನುಮಾನಾಸ್ಪದ ಅಂಶಗಳನ್ನು ಗಮನಿಸಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲಾಯಿತು. ಆರೋಪಿಗಳಿಂದ ವಿಷದ ಬಾಟಲಿಗಳು, ಸಿರಿಂಜ್ಗಳು, ಮೊಬೈಲ್ ಫೋನ್ಗಳು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರಂಭಿಕ ಎಫ್ಎಸ್ಎಲ್ ವರದಿಯಲ್ಲಿ ವಿಷದ ಅಂಶ ಕಂಡುಬಂದಿರಲಿಲ್ಲ. ಆದರೆ ಆರೋಪಿ ಪುಂಡಲೀಕ ಡೊಂಬರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಸ್ಟೇಟಸ್ ಆಧರಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿತು ಎಂದು ತಿಳಿಸಿದರು.
ಸುಮಾ ಮತ್ತು ಪುಂಡಲೀಕ ನಡುವೆ ಕಳೆದ ಎರಡು-ಮೂರು ವರ್ಷಗಳಿಂದ ಅಕ್ರಮ ಸಂಬಂಧವಿದ್ದು, ಇದೇ ಅವಧಿಯಲ್ಲಿ ಸಂದೀಪ ಅವರ ಹೆಸರಿನಲ್ಲಿ ವಿವಿಧ ಕಂಪನಿಗಳ ಮೂಲಕ ವಿಮೆ ಮಾಡಿಸಲಾಗಿತ್ತು. ವಿಮಾ ಹಣ ಪಡೆಯುವುದು ಹಾಗೂ ತಮ್ಮ ಸಂಬಂಧ ಮುಂದುವರಿಸುವ ಉದ್ದೇಶದಿಂದ ಕೊಲೆ ಸಂಚು ರೂಪಿಸಲಾಗಿತ್ತು ಎಂದು ಅವರು ವಿವರಿಸಿದರು.
ಪ್ರಕರಣದಲ್ಲಿ ಎಫ್ಎಸ್ಎಲ್ ಸಿಬ್ಬಂದಿಯೇ ಹಣ ಪಡೆದು ವರದಿ ತಿರುಚಿರುವ ಆರೋಪ ಹೊರಬಂದಿರುವುದು ಅತ್ಯಂತ ಗಂಭೀರ ಬೆಳವಣಿಗೆಯಾಗಿದ್ದು, ರಾಜ್ಯದಲ್ಲೇ ಇಂತಹ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಎಫ್ಎಸ್ಎಲ್ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಗೆ ಧಕ್ಕೆಯಾಗುವಂತಿರುವ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಸ್ಪಿ ರಾಮರಾಜನ್ ಹೇಳಿದರು.






