ಬೆಳಗಾವಿ: ಅಕ್ರಮ ಗೋ ಮಾಂಸ ಸಾಗಾಟ ಆರೋಪ; ಲಾರಿಗೆ ಬೆಂಕಿ ಹಚ್ಚಿದ ವಿಹಿಂಪ, ಬಜರಂಗದಳ ಕಾರ್ಯಕರ್ತರು

ಬೆಳಗಾವಿ : ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಲಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕುಡಚಿ ಪಟ್ಟಣದಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ನಾಲ್ಕು ಲಾರಿಗಳಲ್ಲಿ ಒಂದು ಲಾರಿಯನ್ನು ಹಿಂದುತ್ವ ಕಾರ್ಯಕರ್ತರು ತಡೆದು ಪರಿಶೀಲಿಸಿದಾಗ, KA71 2045 ಲಾರಿಯಲ್ಲಿ ಬೃಹತ್ ಪ್ರಮಾಣದ ಗೋ ಮಾಂಸ ಪತ್ತೆಯಾಗಿದೆ ಎನ್ನಲಾಗಿದೆ. ಹಾಗಾಗಿ ಆಕ್ರೋಶಿತ ಹಿಂದುತ್ವ ಕಾರ್ಯಕರ್ತರು ಲಾರಿಯಲ್ಲಿದ್ದ ಮಾಂಸದ ಸಮೇತ ವಾಹನಕ್ಕೆ ಬೆಂಕಿ ಹಚ್ಚಿದರು ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಅಥಣಿ ಡಿವೈಎಸ್‌ಪಿ ಹಾಗೂ ಕಾಗವಾಡ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







