ಬಾಗಲಕೋಟೆ | ಕಾರು, ಟಂಟಂ ಮುಖಾಮುಖಿ ಢಿಕ್ಕಿ; ಇಬ್ಬರು ಮೃತ್ಯು

ಮಹೇಶ್ ನಾಯ್ಕರ್ | ಮೆಹಬೂಬ್ ಶೇಖ್
ಬಾಗಲಕೋಟೆ : ಇನ್ನೋವಾ ಕಾರು-ಟಂಟಂ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ರವಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಮಹೇಶ್ ನಾಯ್ಕರ್ (27) ಮೆಹಬೂಬ್ ಶೇಖ್ (30) ಎಂದು ಗುರುತಿಸಲಾಗಿದೆ. ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಂಟಂ ನಲ್ಲಿ ಬಾಗಲಕೋಟೆ ಕಡೆಗೆ ಬರುತ್ತಿದ್ದ ಬೆಳಗಾವಿ ನವನಗರದ 45 ಸೆಕ್ಟರ್ ನಿವಾಸಿಗಳಾದ ಈ ಐವರು ಊಟಕ್ಕೆಂದು ಸಮೀಪದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಗೆ ಇನ್ನೋವಾ ಕಾರು ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಮಹಿಂದ್ರಾ ಪಿಕಪ್ವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂಟಂ ಗೆ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.





