ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ : ಜಾರಕಿಹೊಳಿ-ಸವದಿ ಬಣಗಳ ನಡುವೆ ಹೊಡೆದಾಟ

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಒಂದೆಡೆ ಮತದಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಜಾರಕಿಹೊಳಿ ಸಹೋದರರ ಹಾಗೂ ಸವದಿ ಬಣಗಳ ನಡುವೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ.
ಡೆಲಿಗೇಷನ್ ಫಾರ್ಮ್ ಕೊಡುತ್ತಿಲ್ಲ ಎಂದು ಆರೋಪಿಸಿ ಸವದಿ ಬಣದ ಬೆಂಬಲಿಗರು ಕ್ಯಾತೆ ತೆಗೆದಿದ್ದು, ಜಾರಕಿಹೊಳಿ ಬಣದ ಅಭ್ಯರ್ಥಿ ವಿರುದ್ಧ ಆರೋಪ ಮಾಡಿ ಗಲಾಟೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಪೆನಲ್ ಅಭ್ಯರ್ಥಿ ಮತದಾನಕ್ಕೆ 40 ಡೆಲಿಗೇಷನ್ ಫಾರ್ಮ್ ಕೊಡುತ್ತಿಲ್ಲ ಎಂದು ಸವದಿ ಬಣ ಆರೋಪಿಸಿದೆ. ಇದೇ ವಿಚಾರವಾಗಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಾರಕಿಹೊಳಿ ಪೆನಲ್ ನ ಅಭ್ಯರ್ಥಿ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಈ ಆರೋಪ ಮಾಡಲಾಗಿದೆ. ಸವದಿ-ಕತ್ತಿ ಬಣದಿಂದ ಬಸವಗೌಡ ಆಸಂಗಿ ಕಣಕ್ಕಿಳಿದಿದ್ದಾರೆ. ಹೋಟೆಲ್ ಮುಂಭಾಗದಲ್ಲಿ ಸವದಿ ಹಾಗೂ ಜಾರಕಿಹೊಳಿ ಬೆಂಬಲಿಗರು ನೂಕಾಟ-ತಳ್ಳಾಟ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಬರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರಿಗೆ ಮನವೊಲಿಸಿದ್ದಾರೆ.





