ಬೆಳಗಾವಿ | ವಿಕೋಪಕ್ಕೆ ತಿರುಗಿದ ರೈತರ ಪ್ರತಿಭಟನೆ : ಪೊಲೀಸರ ಮೇಲೆ ಕಲ್ಲು ತೂರಾಟ

ಬೆಳಗಾವಿ: ಕಬ್ಬಿಗೆ ನ್ಯಾಯಬೆಲೆ ನೀಡುವಂತೆ ಆಗ್ರಹಿಸುತ್ತಿದ್ದ ರೈತರಿಂದ ಹತ್ತರಗಿ ಟೋಲ್ಗೇಟ್ ಬಳಿ ನಡೆಸಲಾದ ಪ್ರತಿಭಟನೆ ಇಂದು ವಿಕೋಪಕ್ಕೆ ತಿರುಗಿದೆ.
ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ 48) ಬಂದ್ ಮಾಡಲು ರೈತರು ಮುಂದಾದ ವೇಳೆ ಪೊಲೀಸರು ಅವರನ್ನು ಹಿಂದೆ ಹೋಗುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಲಾಠಿಚಾರ್ಜ್ ನಿಂದ ಸ್ಥಳದಲ್ಲಿ ಕೆಲಕಾಲ ಗದ್ದಲ ಸೃಷ್ಟಿಯಾಗಿ, ರೈತರು ಎಲ್ಲೆಡೆ ಓಡಿದ್ದಾರೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕೆಲ ಕಾಲ ಹೆದ್ದಾರಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ನಂತರ ನಿಯಂತ್ರಣಕ್ಕೆ ಬಂದಿದೆ.
ಹತ್ತರಗಿ ಟೋಲ್ ಪ್ಲಾಜಾ ಹಾಗೂ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದರೂ, ಸ್ಥಳದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಪೊಲೀಸರು ಶಾಂತಿ ಕಾಪಾಡಲು ರೈತರಿಗೆ ಮನವಿ ಮಾಡಿದ್ದು, ಹೋರಾಟಗಾರರ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ.





