ಬೆಳಗಾವಿ | ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಮರಣ ದಂಡನೆ

ಭರತೇಶ್ ರಾವಸಾಬ ಮಿರ್ಜಿ(28)
ಬೆಳಗಾವಿ, ಸೆ.26: 2019ರಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ ಆರೋಪಿ ಭರತೇಶ್ ರಾವಸಾಬ ಮಿರ್ಜಿ(28)ಗೆ ಬೆಳಗಾವಿ ಜಿಲ್ಲಾ ಪೊಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
2019ರ ಅಕ್ಟೋಬರ್ 15ರಂದು ಸಂಜೆ ಬಾಲಕಿ ಮನೆ ಹತ್ತಿರದ ಅಂಗಡಿಗೆ ಹೋಗಿ ಮರಳುವಾಗ ಆರೋಪಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆಯ ದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿದ್ದ. ಹುಡುಕಾಟದ ವೇಳೆ ಶ್ವಾನದಳದ ಸಹಾಯದಿಂದ ಬಾವಿಯಲ್ಲಿ ಶವ ಪತ್ತೆಯಾಯಿತು.
ವಿಚಾರಣೆಯಲ್ಲಿ 20 ಸಾಕ್ಷಿಗಳ ಹೇಳಿಕೆ, 106 ದಾಖಲೆಗಳು ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಭರತೇಶ್ ವಿರುದ್ಧದ ಆರೋಪಗಳು ಸಾಬೀತಾಗಿವೆ.
ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದು, ಮರಣದಂಡನೆ ಜೊತೆಗೆ ವಿವಿಧ ಶಿಕ್ಷೆಗಳು ಹಾಗೂ ದಂಡ ವಿಧಿಸಿದ್ದಾರೆ. ಜೊತೆಗೆ ಬಾಲಕಿಯ ತಂದೆ-ತಾಯಿಗೆ 10 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ.ಪಾಟೀಲ್ ವಾದ ಮಂಡಿಸಿದ್ದರು.





