ಬೆಳಗಾವಿ | ಎಂಇಎಸ್ ಮುಖಂಡನ ಜತೆ ಪೊಲೀಸ್ ಇನ್‌ಸ್ಪೆಕ್ಟರ್ ಸೆಲ್ಫಿ : ವ್ಯಾಪಕ ಆಕ್ರೋಶ

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದ ವಿರೋಧಿಸಿ “ಕರಾಳ ದಿನಾಚರಣೆ” ನಡೆಸುತ್ತಿದ್ದ ಎಂಇಎಸ್ ಮುಖಂಡ ಶುಭಂ ಶಳಕೆ ಅವರೊಂದಿಗೆ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ. ಕಾಲಿಮಿರ್ಚಿ ಅವರು ಸೆಲ್ಪಿ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಇದೀಗ ವಿವಾದಕ್ಕೀಡಾಗಿದೆ.
ಸಿಪಿಐ ಕಾಲಿಮಿರ್ಚಿ ಅವರು ಶಳಕೆಯ ಜೊತೆ ಸೆಲ್ಪಿ ತೆಗೆದುಕೊಂಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕನ್ನಡ ಸಂಘಟನೆಗಳು, ಸಾಮಾಜಿಕ ಜಾಲತಾಣದಲ್ಲಿ ಜನರು ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಭಂ ಶಳಕೆ ವಿರುದ್ಧ ಹಲವು ಪ್ರಕರಣಗಳು :
ಎಂಇಎಸ್ ಕಾರ್ಯಕರ್ತ ಶುಭಂ ಶಳಕೆ ವಿರುದ್ಧ ಭಾಷಾ ಸಾಮರಸ್ಯ ಹಾಳು ಮಾಡುವ, ಶಾಂತಿ ಭಂಗ ಮಾಡುವ ಹಲವು ಪ್ರಕರಣಗಳು ದಾಖಲಾಗಿದ್ದು, ಇಂತಹ ವ್ಯಕ್ತಿಯೊಂದಿಗೆ ಪೊಲೀಸ್ ಅಧಿಕಾರಿ ಸೆಲ್ಪಿ ತೆಗೆದುಕೊಳ್ಳುವುದು, ಪೊಲೀಸರ ನಿಷ್ಪಕ್ಷಪಾತತೆ ಕುರಿತು ಪ್ರಶ್ನೆ ಎಬ್ಬಿಸಿದೆ.
ಈ ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ಹಾಗೂ ಕ್ರಮಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ರಾಜ್ಯೋತ್ಸವದ ದಿನವೇ “ಕರಾಳ ದಿನಾಚರಣೆ” ನಡೆಸಿದ ಎಂಇಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.







