ಬೆಳಗಾವಿ ಅಧಿವೇಶನ | ಸಾಲುಮರದ ತಿಮ್ಮಕ್ಕ, ಎಚ್.ವೈ.ಮೇಟಿ, ಎಸ್.ಎಲ್.ಭೈರಪ್ಪ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

ಬೆಳಗಾವಿ : ಇತ್ತೀಚಿಗೆ ಅಗಲಿದ ಪದ್ಮಶ್ರೀ ಪುರಸ್ಕೃತೆ, ಸಾಲುಮರದ ತಿಮ್ಮಕ್ಕ, ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ವೈ.ಮೇಟಿ, ಮಾಜಿ ಸಚಿವ ಆರ್.ವಿ.ದೇವರಾಜ್ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು, ವಿಧಾನಸಭೆಯ ಹಾಲಿ ಸದಸ್ಯ ಎಚ್.ವೈ.ಮೇಟಿ, ಮಾಜಿ ಸದಸ್ಯರಾದ ಆರ್.ವಿ.ದೇವರಾಜ್, ಶಿವಶರಣಪ್ಪ ಗೌಡ ಪಾಟೀಲ್, ವೃಕ್ಷಮಾತೆ ಸಾಲುಮರದ ತಿಮಕ್ಕ, ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಹಾಸ್ಯ ನಟ ಎಂ.ಎಸ್.ಉಮೇಶ್ ನಿಧನವಾಗಿದ್ದಾರೆ ಎಂದು ವಿಧಾನಸಭೆಗೆ ತಿಳಿಸಿದರು.
ಹಾಲಿ ಶಾಸಕ ಎಚ್.ವೈ.ಮೇಟಿ ಬಾಗಲಕೋಟೆಯ ತಿಮಾಪುರ ಗ್ರಾಮದಲ್ಲಿ 1946ರಲ್ಲಿ ಜನಿಸಿದರು. ಮಂಡಲ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಎಂ.ಎಸ್.ಐ.ಎಲ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ನಂತರ 10, 12 ಮತ್ತು 14ನೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 1996ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸಂಸದರಾಗಿದ್ದರು, ಸಚಿವರಾಗಿ ಕೆಲಸ ಮಾಡಿದ್ದರು ಎಂದು ವಿವರಿಸಿದರು.
ಆರ್.ವಿ.ದೇವರಾಜ್ 1952 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಎ ಪದವೀಧರರಾಗಿದ್ದ ಅವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದರು. ಉತ್ತಮ ಸಂಘಟಕರು. 1989ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿ, ನಂತರ 11ನೆ ವಿಧಾನಸಭೆಗೂ ಮರು ಆಯ್ಕೆಯಾಗಿದ್ದರು. ಚಿಕ್ಕಪೇಟೆ ಕ್ಷೇತ್ರದಿಂದ 14ನೆ ವಿಧಾನಸಭೆಗೂ ಪ್ರವೇಶಿಸಿದ್ದು ಮಾತ್ರವಲ್ಲದೆ, 2004ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಜತೆಗೆ ಕೆಎಸ್ಸಾರ್ಟಿಸಿ ಸಂಸ್ಥೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು ಎಂದು ಉಲ್ಲೇಖಿಸಿದರು.
ಶಿವಶರಣಪ್ಪಗೌಡ ಪಾಟೀಲ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹುಣಸಿಹಾಳ ಗ್ರಾಮದಲ್ಲಿ 1948 ರಲ್ಲಿ ಜನಿಸಿದರು. ಎಂಎ ಸ್ನಾತಕೋತ್ತರ ಪದವೀಧರರಾಗಿ, ಕೃಷಿಕರಾಗಿದ್ದರು. ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ತುಂಗಭದ್ರಾ ಅಣೆಕಟ್ಟು ಮಂಡಳಿ ಮತ್ತು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1989 ಮತ್ತು 99ರಲ್ಲಿ ಯಲಬುರ್ಗಾ ಕ್ಷೇತ್ರದಿಂದ ಗೆದ್ದು, ಮತ್ತೆ 11ನೆ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಸ್ಪೀಕರ್ ಹೇಳಿದರು.
ವೃಕ್ಷ ಮಾತೆ ಸಾಲುಮರದ ತಿಮಕ್ಕ 1911ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದರು. ಮಕ್ಕಳಿಲ್ಲದ ದುಃಖ ಮರೆಯಲು ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳೆಸಲಾರಂಭಿಸಿದ್ದರು. ಬಿಂದಿಗೆಯಲ್ಲಿ ನಾಲ್ಕು ಕಿಲೋಮೀಟರ್ ದೂರದಿಂದ ನೀರು ತಂದು ಗಿಡಗಳನ್ನು ಮಕ್ಕಳಂತೆ ಪೋಷಿಸಿದರು.
ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮಕ್ಕ ಎಂದು ಹೆಸರು ಪಡೆದಿದ್ದರು. ಅನಕ್ಷರಸ್ಥರಾಗಿದ್ದರೂ ಅವರ ಪರಿಸರ ಕಾಳಜಿ ಅಪಾರವಾಗಿತ್ತು. ಕೇಂದ್ರ ಸರಕಾರದಿಂದ ಪೌರ ಪುರಸ್ಕಾರ, ಪದ್ಮಶ್ರೀ, ಇಂದಿರಾ ಪ್ರಿಯದರ್ಶಿನಿ, ಕರ್ನಾಟಕ ಕಲ್ಪವಲ್ಲಿ, ರಾಜ್ಯೋತ್ಸವ ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸಾಲುಮರದ ತಿಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿತ್ತು ಎಂದು ವಿವರಿಸಿದರು.
ಎಸ್.ಎಲ್.ಭೈರಪ್ಪ ಅವರು 1931ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಸತ್ಯ ಮತ್ತು ಸೌಂದರ್ಯ ಎಂಬ ಮಹಾ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಪಡೆದಿದ್ದರು. ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜು, ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯ, ಹೊಸದಿಲ್ಲಿಯ ಎನ್‍ಸಿಇಆರ್‍ಟಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಾಗಿದ್ದರು. ಸಮಗ್ರ ಅಧ್ಯಯನದ ಮೂಲಕ ಕಾದಂಬರಿ ರಚಿಸುವ ಅವರ ಶೈಲಿ ಜನ ಮೆಚ್ಚಿಗೆ ಪಡೆದಿತ್ತು. 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದರು. ಎಲ್ಲವೂ ಜನಪ್ರಿಯವಾಗಿದ್ದು ಕೆಲವು ಚಲನಚಿತ್ರಗಳಾಗಿಯೂ ನಿರ್ಮಾಣಗೊಂಡಿವೆ ಎಂದು ಆವರಣ ಮತ್ತು ಪರ್ವ ಕಾದಂಬರಿಗಳ ಓರಣದ ಬಗ್ಗೆ ಸಭಾಧ್ಯಕ್ಷರು ವಿವರಿಸಿದರು.
ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮಾನ, ಪಂಪ ಪ್ರಶಸ್ತಿ, ಎನ್‍ಟಿಆರ್ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ತಮಗೆ ಸಂದ ಪ್ರಶಸ್ತಿಗಳ ಮೌಲ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದರು ಎಂದು ಗುಣಗಾನ ಮಾಡಿದರು.
ಚಲನಚಿತ್ರರಂಗದಲ್ಲಿ ಎಂ.ಎಸ್.ಉಮೇಶ್ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದರು. 1940 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಕೆ.ಹೀರಣ್ಣಯ್ಯ ನಾಟಕ ಮಂಡಳಿಯಿಂದ ಬಸವೇಶ್ವರರ ನಾಟಕದಲ್ಲಿ ಬಿಚ್ಚಳನ ಮಗನ ಪಾತ್ರದಲ್ಲಿ ನಟಿಸುವ ಮೂಲಕ ತಮ ನಾಲ್ಕನೆ ವರ್ಷಕ್ಕೆ ರಂಗಭೂಮಿಗೆ ಪ್ರವೇಶಿಸಿದರು. ಪಿಯಾನೋ ವಾದಕರಾಗಿ, ಕುಂಚ ಕಲಾವಿದರಾಗಿ, ಹಾರ್ಮೋನಿಯಂ ವಾದಕರಾಗಿ ಗುರುತಿಸಿಕೊಂಡಿದ್ದರು.
ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಒಟ್ಟು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಕಥಾಸಂಗಮ ಚಿತ್ರದ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದರು ಎಂದು ವಿವರಿಸಿದರು.
ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್.ವಿ.ದೇವರಾಜ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿಗೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ. ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ದೇವರಾಜ್ ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಅವರು ವಿವಿಧ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕ್ಷೇತ್ರದ ಜನರ ಹಾಗೂ ರೈತರ ಪರವಾಗಿ ಸದಾ ಅವರು ಶ್ರಮಿಸುತ್ತಿದ್ದರು. ಪಾಟೀಲ್ ನಿಧನದಿಂದ ಒಬ್ಬ ಮುಸ್ಸದ್ದಿ ಹಾಗೂ ರೈತರ ಪರ ನಾಯಕನನ್ನು ಕಳೆದುಕೊಂದಂತಾಗಿದೆ ಎಂದು ನುಡಿದರು.
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕುರಿತು ಉಲ್ಲೇಖಿಸಿದ ಅವರು, ಭೈರಪ್ಪ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದವರು. ಇವರ ಹಲವು ಪುಸ್ತಕಗಳು ಇಂಗ್ಲೀಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಇಂಗ್ಲೀಷ್ ನಲ್ಲಿ ರಚಿಸಿದ ‘ಸತ್ಯ ಮತ್ತು ಸೌಂದರ್ಯ’ ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಪರ್ವ’ ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿದಂತೆ ಹಲವು ಕಾದಂಬರಿಗಳು ಮರಾಠಿ ಓದುಗರ ಮೆಚ್ಚುಗೆಗೂ ಪಾತ್ರವಾಗಿದ್ದವು ಎಂದರು.
ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಭೈರಪ್ಪನವರು ತಮ್ಮದೇ ಆದ ದೊಡ್ಡ ಓದುಗ ಬಳಗವನ್ನ ಸೃಷ್ಟಿಸಿಕೊಂಡಿದ್ದರು. ಅನನ್ಯ ಸಾಹಿತಿ, ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವುಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದ ಉಮೇಶ್ ರವರು ತಮ್ಮ ವಿಶಿಷ್ಟ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನ ಗೆದ್ದವರು.ಹಿರಿಯ ನಟ ಉಮೇಶ್ ನಿಧನದಿಂದ ಕನ್ನಡ ಚಿತ್ರರಂಗ ಅನುಭವಿ ಹಾಗೂ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ ಎಂದರು.
ಬಳಿಕ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಮತ್ತಿತರರು ಧ್ವನಿಗೂಡಿಸಿದರು. ಆನಂತರ, ಅಗಲಿದ ಎಲ್ಲರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿ, ಸಭಾಧ್ಯಕ್ಷ ಯು.ಟಿ.ಖಾದರ್ ಸದನದಲ್ಲಿ ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಮುಖ್ಯಮಂತ್ರಿ ಅನುಮೋದಿಸಿದರು.
ಮೇಟಿ ಎಲ್ಲರನ್ನು ಪ್ರೀತಿಯಿಂದ ಕಾಣುವ ಸ್ವಭಾವ: ಸಿದ್ದರಾಮಯ್ಯ
‘ದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿದ್ದ ಎಚ್.ವೈ.ಮೇಟಿ ಅವರು ಎಲ್ಲ ಜಾತಿ-ಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು. ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕ. ನನ್ನ ಅನುಯಾಯಿಗಳಲ್ಲಿ ಮೇಟಿ ಅಗ್ರಗಣ್ಯರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ: ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು.
ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಕೆ.ನರಹರಿ, ಪರಿಷತ್ತಿನ ಹಾಗೂ ಶಾಸಕ ಆರ್.ವಿ.ದೇವರಾಜ್, ವಿಧಾನಸಭೆ ಹಾಲಿ ಸದಸ್ಯರಾಗಿದ್ದ ಹುಲ್ಲಪ್ಪ ಯಮನಪ್ಪ ಮೇಟಿ, ಖ್ಯಾತ ಜಾನಪದ ತಜ್ಞ ಡಾ.ಎನ್.ಆರ್.ನಾಯಕ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಹಿರಿಯ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್, ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ, ಪರಿಸರ ಸಂರಕ್ಷಣೆಯಲ್ಲಿಯೇ ತನ್ನ ಜೀವನ ಸವೆಸಿದ ಸಾಲುಮರದ ತಿಮ್ಮಕ್ಕ, ಖ್ಯಾತ ನಟ ಹಾಗೂ ನಿರ್ಮಾಪಕರಾಗಿದ್ದ ಧರ್ಮೇಂದ್ರ ಹಾಗೂ ಹಿರಿಯ ಹಾಸ್ಯನಟ ಮೈಸೂರು ಶ್ರೀಕಂಠಯ್ಯ ಉಮೇಶ್ ಅವರುಗಳು ನಿಧನಕ್ಕೆ ವಿಷಾದ ವ್ಯಕ್ತಪಡಿಸಿ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿರ್ಣಯ ಮಂದಿಸಿದರು. ಪರಿಷತ್ತಿನ ಸಭಾ ನಾಯಕರು ಹಾಗೂ ಸಣ್ಣ ನೀರಾವರಿ ಸಚಿವ ಭೋಸರಾಜು ಹಾಗೂ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮೃತರ ಕುರಿತು ಮಾತನಾಡಿದರು.







