ಬೆಳಗಾವಿ| ಪಂಚಮಸಾಲಿಗರ ಮೇಲಿನ ಹಲ್ಲೆ ಖಂಡಿಸಿ ಮೌನ ಪಥಸಂಚಲನ : ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಪಂಚಮಸಾಲಿ 2 ಮೀಸಲಾತಿಗಾಗಿ ಕಳೆದ ವರ್ಷ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿದ್ದೆವು. ಈ ವೇಳೆ ಸಮಾಜದ ಬಾಂಧವರ ಮೇಲೆ ಪೊಲೀಸ್‌ರಿಂದ ಮಾರಣಾಂತಿಕ ಹಲ್ಲೆ ಮಾಡಿಸಿದ್ರು. 2024 ಡಿಸೆಂಬರ್ 10 ರಂದು ಪಂಚಮಸಾಲಿಗರ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು. ಪಂಚಮಸಾಲಿಗರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ನಾವು ಮೌನ ಪಥಸಂಚಲನ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಬಾಂಧವರ ಮೇಲಿನ ಹಲ್ಲೆ ನಮ್ಮ ಮನಸ್ಸಿಗೆ ನೋವಾಗಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟವನ್ನು ಉದಾಸೀನ ಮಾಡಿದೆ. ಇದು ನಮ್ಮ ಸಮಾಜದ ಬಾಂಧವರ ಮನಸ್ಸಿಗೆ ಪೆಟ್ಟಾಗಿದೆ. ಆದ್ದರಿಂದ ನಾಡಿನ ಎಲ್ಲ ಪಂಚಮಸಾಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮೇಲೆ ಮೀಸಲಾತಿಗಾಗಿ ಒತ್ತಡ ಹಾಕುವ ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದವರು ಇನ್ನು ಮುಂದೆ ಸಿಎಂ ಬಳಿ ತೆರಳಿ ಮೀಸಲಾತಿ ಕೇಳಲ್ಲ. ಅವರೇ ನಮ್ಮ ಹೋರಾಟ ಪರಿಗಣನೆ ಮಾಡಿ ಮೀಸಲಾತಿ ನೀಡಿದ್ರೆ ಸ್ವಾಗತ ಮಾಡುತ್ತೇವೆ ಎಂದರು.
ಮೀಸಲಾತಿಗಾಗಿ ಸಮಾಜದ ಮುಖಂಡರಲ್ಲಿ ಒಡಕು ಉಂಟಾಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಸಮಾಜದ ಬಾಂಧವರೊಂದಿಗೆ ಸೇರಿ ಹೋರಾಟ ಮುಂದುವರೆಸುತ್ತೇವೆ. ಅಧಿಕಾರ ಇದ್ದಾಗ ಕೆಲವರು ಹೋರಾಟದಲ್ಲಿ ಭಾಗಿಯಾಗಲು ಹಿಂದೇಟು ಹಾಕ್ತಾರೆ. ಅಧಿಕಾರವಿಲ್ಲದಿದ್ದಾಗ ಎಲ್ಲರೂ ನಾವು ಸಮಾಜದ ಪರವಾಗಿದ್ದೇವೆ ಎನ್ನುತ್ತಾರೆ. ನಮ್ಮ ಸಮಾಜದ ಸಚಿವರು, ಶಾಸಕರು ಹೋರಾಟದಲ್ಲಿ ಭಾಗಿಯಾಗದಿದ್ದರೂ ಪರವಾಗಿಲ್ಲ. ಆದರೆ ಸದನದಲ್ಲಿ ಮೀಸಲಾತಿ ಕುರಿತು ಧ್ವನಿ ಎತ್ತಿದ್ರೆ ಸಾಕು ಎಂದ ಶ್ರೀಗಳು.







