‘ಅಕ್ರಮ ಮದ್ಯ ತಡೆ’ಗೆ ಸದನ ಸಮಿತಿ ರಚನೆ ಮಾಡಿ : ಬಿ.ಆರ್.ಪಾಟೀಲ್

ಬೆಳಗಾವಿ : ರಾಜ್ಯದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಸರಕಾರ, ಸದನ ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಬಿ.ಆರ್.ಪಾಟೀಲ್ ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಬಿ.ಪಿ.ಹರೀಶ್ ಕೇಳಿದ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್ ನೀಡಿದ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಸರಕಾರವೇ ಮದ್ಯ ಕುಡಿಯಲು ಪ್ರೋತ್ಸಾಹ ನೀಡಿ. ಆ ಬಳಿಕ ಕುಡಿಯುಬೇಡಿ ಎಂದು ಜಾಗೃತಿ ಮೂಡಿಸಿದರೆ ಏನು ಪ್ರಯೋಜನ ಎಂದು ತಮ್ಮ ಸರಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸಭೆ ನಡೆಸಿದ್ದು, ಅನುದಾನ ಸಿಕ್ಕರೆ ಮದ್ಯಪಾನದಿಂದ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಆರ್.ಬಿ.ತಿಮ್ಮಾಪೂರ್ ಉತ್ತರಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಪಿ.ಹರೀಶ್, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ಚಿಕ್ಕಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮದ್ಯದ ದಾಸರಾಗುತ್ತಿದ್ದು, ರಸ್ತೆ ಅಪಘಾತಗಳು ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಹೀಗಾಗಿ ಸರಕಾರ ಕಟ್ಟುನಿಟ್ಟಾಗಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.







