ಸಿಎಂ ಬದಲಾವಣೆಯಾದರೆ ಸಾಲದು, ಕಾಂಗ್ರೆಸ್ ಪಕ್ಷವೇ ಅಧಿಕಾರಿದಿಂದ ಕೆಳಗಿಳಿಯಬೇಕು: ಸಿ.ಟಿ.ರವಿ

ಸಿ.ಟಿ. ರವಿ (File Photo)
ಬೆಳಗಾವಿ: ಸಿದ್ದರಾಮಯ್ಯನವರನ್ನು ಬಿಟ್ಟು ಮತ್ತೊಬ್ಬರು ಮುಖ್ಯಮಂತ್ರಿಯಾದರೆ ಸಾಲದು. ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರವೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನೆರೆ ಪೀಡಿತ ರೈತರ ಸಂಕಷ್ಟದ ನಡುವೆ ಸಿದ್ದರಾಮಯ್ಯ ಅವರಿಗೆ ‘ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ’ ಎಂಬುದೇ ಮುಖ್ಯವಾಗಿದೆ. ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ, ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ರೈತರ, ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಡಿಎನ್ಎನಲ್ಲೇ ಇದೆ. ಭ್ರಷ್ಟಾಚಾರ ಕಡಿಮೆಯಾದರೆ ಮಾತ್ರವೇ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಭ್ರಷ್ಟಾಚಾರ ತೊಲಗಬೇಕೆಂದರೆ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಯಬೇಕು ಎಂದ ಸಿ.ಟಿ.ರವಿ, ‘ಇನ್ನು ಎರಡೂವರೆ ವರ್ಷ ನಾನೇ ಸಿಎಂ ಎನ್ನುತ್ತಾರೆ ಸಿದ್ದರಾಮಯ್ಯ. 5 ವರ್ಷ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಅಧಿಕಾರ ಕೊಟ್ಟಿದ್ದಾರೆ. ಭ್ರಷ್ಟಾಚಾರ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಸಂವೇದನೆ ಕಳೆದುಕೊಂಡಿದೆ. ಸಚಿವರಿಗೆ ಜನರ ಸಂಕಷ್ಟಕ್ಕಿಂತ ಚುನಾವಣೆಯ ಪ್ರತಿಷ್ಠೆಯೇ ದೊಡ್ಡದಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಮುಳುಗಿದ್ದಾರೆಯೇ ಹೊರತು ಜನರ ಸಂಕಷ್ಟ ಕೇಳುವ ಸಂವೇದನೆ ಅವರಿಗೆ ಇರಲಿಲ್ಲ ಎಂದು ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು.







