Chikkodi | ವಿದ್ಯುತ್ ಸ್ಪರ್ಶದಿಂದ ಬಾಲಕಿ ಮೃತ್ಯು

ಸಾನ್ವಿ ಕಾಂಬಳೆ (9)
ಬೆಳಗಾವಿ : ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ದುರ್ಘಟನೆಯಲ್ಲಿ ಸಾನ್ವಿ ಕಾಂಬಳೆ (9) ಎಂಬ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ.
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾನ್ವಿ, ರಜೆಯ ಹಿನ್ನೆಲೆಯಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಸ್ಕಿಪ್ಪಿಂಗ್ ಆಡುತ್ತಿದ್ದಳು. ಈ ವೇಳೆ ಸ್ಕಿಪ್ಪಿಂಗ್ ಹಗ್ಗವು ಸಮೀಪದ ವಿದ್ಯುತ್ ತಂತಿಗೆ ತಗುಲಿತ್ತು. ಹಗ್ಗವನ್ನು ತೆಗೆದುಕೊಳ್ಳಲು ಹೋಗಿದಾಗ ಆಕೆ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದಾಳೆ ಎನ್ನಲಾಗಿದೆ.
ವಿದ್ಯುತ್ ಆಘಾತದಿಂದ ಸಮತೋಲನ ಕಳೆದುಕೊಂಡ ಸಾನ್ವಿ ಮನೆಯ ಮೇಲಿನಿಂದ ಕೆಳಗೆ ಬಿದ್ದಿದ್ದು, ತೀವ್ರ ಗಾಯಗೊಂಡಿದ್ದಳು. ತಕ್ಷಣವೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಅಂಕಲಿ ಪೊಲೀಸರು ತಿಳಿಸಿದ್ದಾರೆ.
Next Story




