ಚಿಕ್ಕೋಡಿಯ ಕಿರಣ್ ಕಮತೆಗೆ ಯುಪಿಎಸ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್

ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟ ಗ್ರಾಮದ ಕಿರಣ್ ಸಣ್ಣಪ್ಪ ಕಮತೆ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ‍್ಯಾಂಕ್ ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಮಹತ್ವದ ಸಾಧನೆ ಮೆರೆದಿದ್ದಾರೆ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದಿರುವ ಕಿರಣ್ ಕಮತೆ, ಸದ್ಯ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಿರಣ್ ಅವರ ತಂದೆ ಡಾ.ಸಣ್ಣಪ್ಪ ಕಮತೆ ನಿಡಸೋಸಿಯ ಹೀರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ರುಕ್ಮಿಣಿ ಗೃಹಿಣಿಯಾಗಿಯಾಗಿದ್ದಾರೆ.
ಕಿರಣ್ ಅವರ ವಿದ್ಯಾಭ್ಯಾಸದ ಹಾದಿ ವೈವಿಧ್ಯಮಯವಾಗಿದೆ. ಅವರು 1 ಮತ್ತು 2ನೇ ತರಗತಿಯನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬೆಜೋಗಾಯಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದಾರೆ. 3 ರಿಂದ 8ನೇ ತರಗತಿಯನ್ನು ಹುಬ್ಬಳ್ಳಿಯ ಎಂ.ಆರ್. ಸಾಖರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರು. 9 ಮತ್ತು 10ನೇ ತರಗತಿಯನ್ನು ಗದಗದ ಕೆಎಲ್ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮುಗಿಸಿದರು. ಗೋಗಟೆ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದ ಅವರು, 2023ರಲ್ಲಿ ಪಿಡಬ್ಲುಡಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಾತಿ ಹೊಂದಿದ್ದರು.
ಯುಪಿಎಸ್‌ಸಿ ಸಾಧಕ ಕಿರಣ್ ಕಮತೆ ಅವರು ಮಾತನಾಡಿ, "ಇದು ನನ್ನ ಕೊನೆಯ ಅವಕಾಶವಾಗಿತ್ತು. ಕೆಲಸ ಮಾಡುತ್ತಲೇ ದಿನಕ್ಕೆ ಐದಾರು ಗಂಟೆ ಓದುತ್ತಿದ್ದೆ. ಏನಾದರೂ ಆಗಲಿ ಈ ಸಲ ಪಾಸ್ ಆಗಲೇಬೇಕು ಎಂದುಕೊಂಡು ಪರೀಕ್ಷೆ ಬರೆದಿದ್ದೆ. 250 ರ‍್ಯಾಂಕ್ ಒಳಗೆ ಬರುವ ನಿರೀಕ್ಷೆ ಇತ್ತು. ಆದರೆ 53ನೇ ರ್ಯಾಂಕ್ ಬಂದಿರುವುದು, ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಸಿಕ್ಕಿರುವುದಕ್ಕೆ ಬಹಳಷ್ಟು ಖುಷಿಯಾಗುತ್ತಿದೆ" ಎಂದು ಸಂತಸ ಹಂಚಿಕೊಂಡರು.
"ಬಾಲ್ಯದಲ್ಲಿ ತಂದೆಯವರು ಯುಪಿಎಸ್‌ಸಿ ಕನಸು ಬಿತ್ತಿದ್ದರು. ಕಳೆದ ಆರು ವರ್ಷಗಳಿಂದ ಸತತವಾಗಿ ಪ್ರಯತ್ನಿಸಿದ್ದೆ. ತಂದೆ-ತಾಯಿಗೆ ಈ ಸಾಧನೆಯನ್ನು ಅರ್ಪಿಸುತ್ತೇನೆ. ಪತ್ನಿ ಲೋಚನಾ ಅವರ ಸಹಕಾರವೂ ಇತ್ತು. ಸಹೋದರಿ, ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು ಸೇರಿ ಎಲ್ಲರೂ ಪ್ರೋತ್ಸಾಹಿಸಿದ್ದರು. ಅವರೆಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ" ಎಂದು ಕಿರಣ್ ಭಾವುಕರಾಗಿ ತಿಳಿಸಿದರು.
ಕಿರಣ್ ಅವರ ತಂದೆ ಡಾ. ಸಣ್ಣಪ್ಪ ಕಮತೆ ಅವರು ಮಾತನಾಡಿ, "ಶಿಕ್ಷಕರ ಮಕ್ಕಳು, ಸಾಮಾನ್ಯ ಕುಟುಂಬದಿಂದ ಬಂದಿರುವ ಮನೆಯ ಮಕ್ಕಳು ಸಾಧನೆ ಮಾಡುವುದು ಅತ್ಯಂತ ಹೆಮ್ಮೆಯ ಸಂಗತಿ. ಇದು ಇತರರಿಗೂ ಪ್ರೇರಣೆಯಾಗುತ್ತದೆ. ನಮ್ಮ ಮಗನ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಬಹಳ ಖುಷಿಯಾಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.







