‘ಮೂಲ ಭೋವಿ ಸಮುದಾಯ’ದವರಿಗೆ ಜಾತಿ ಪ್ರಮಾಣ ಪತ್ರದ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಬೆಳಗಾವಿ (ಸುವರ್ಣ ವಿಧಾನಸೌಧ) : ಪರಿಶಿಷ್ಟರ ಪಟ್ಟಿಯಲಿರುವ ‘ಭೋವಿ’ ಪದದ ಜತೆಗೆ ಮೆಣೆ, ಪಲ್ಲಕ್ಕಿ ಹೊರುವ ಮೂಲ ಭೋವಿ ಜಾತಿಯವರಿಗೆ ‘ಜಾತಿ ಪ್ರಮಾಣ ಪತ್ರ’ ಪಡೆಯಲು ಆಗುತ್ತಿರುವ ತೊಂದರೆ ನಿವಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಅಖಿಲ ಕರ್ನಾಟಕ ಭೋವಿ ಸಮಾಜದ ವಿವಿಧೋದ್ದೇಶ ಕಲ್ಯಾಣ ಸಂಘ’ ಇಲ್ಲಿನ ಹೊಂಡಸ್ಕೊಪ್ಪ ಬಳಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಿತು.
ಸಂಘದ ಲಕ್ಷ್ಮಣ ವಿನೋಭಾ ಭೋವಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, ಅಂಬಿಗ ಬೆಸ್ತ್ರ ಹಾಗೂ ವಡ್ಡರಲ್ಲದ ಮೆಣೆ ಪಲ್ಲಕ್ಕಿ ಹೊರುವ ಮೂಲ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸಂಬಂಧಪಟ್ಟ ತಹಶೀಲ್ದಾರರು ಹೊರಡಿಸಿರುವ ಆದೇಶಗಳನ್ನು ಪರಿಗಣಿಸದೆ, ಭೋವಿ ಸಮಾಜದ ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳು ಹಾಗೂ ಸರಕಾರಿ ಉದ್ಯೋಗ ಬಯಸಿ ನೇಮಕವಾದವರಿಗೆ ಸಿಂಧುತ್ವ ಪ್ರಮಾಣ ಪತ್ರಗಳನ್ನು ನಿರಾಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವೇಳೆ ಕೇವಲ ‘ಭೋವಿ’ ಎಂದು ಪರಿಗಣಿಸುವುದರ ಜತೆಗೆ ಸಮಾನಾಂತರ ಜಾತಿಗಳನ್ನು ಪರಿಗಣಿಸಬಾರದು. ಸರಕಾರ ರಚನೆ ಮಾಡಿರುವ ಭೋವಿ ನಿಗಮದ ಹೆಸರನ್ನು ಭೋವಿ ಜಾತಿಯ ಹೊರತಾಗಿ ಅನ್ಯಜಾತಿ ಹೆಸರಿನಲ್ಲಿ ಪರಿಗಣಿಸದೇ ಭೋವಿ ಜಾತಿ ಹೆಸರಿನಲ್ಲಿ ಮುಂದೆವರಿಸಬೇಕು. ಭೂವಿ ಜಾತಿಗೆ ಸಂಬಂಧವಿರದ ಭೋವಿ ಹೊರತಾಗಿ ಸಮಾನಾಂತರ ಪದಗಳನ್ನು ಮೂಲ ಭೂವಿ ಜಾತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದರು.
ಮೂಲ ಭೋವಿ ಜನಾಂಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಾಲೆ, ವಸತಿ ನಿಲಯಗಳನ್ನು ನಿರ್ಮಿಸಲು ಹಾಗೂ ಸಮುದಾಯ ಭವನ ನಿರ್ಮಿಸಲು ಹುಬ್ಬಳ್ಳಿ-ಧಾರವಾಡದಲ್ಲಿ ಸರಕಾರದಿಂದ ವೇಶನ ಒದಗಿಸಬೇಕು. ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಆ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಜತೆ ಚರ್ಚಿಸಿ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು ಎಂದು ತಿಳಿಸಲಾಗಿದೆ. ಈ ವೇಳೆ ಸಂಘದ ಕಾರ್ಯಾಧ್ಯಕ್ಷ ಹುಚ್ಚಪ್ಪ ಭೋವಿ, ಕಾರ್ಯದರ್ಶಿ ಸುಭಾಶ್ಚಂದ್ರ ವೆಂಟಬೇನೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಹಾಜರಿದ್ದರು.







