ನದಿ ಮೂಲ ಕಲುಷಿತಗೊಳ್ಳದಂತೆ ಬಡಾವಣೆಗಳ ಅಭಿವೃದ್ಧಿ: ಸಚಿವ ಬೈರತಿ ಸುರೇಶ್

ಬೈರತಿ ಸುರೇಶ್
ಬೆಳಗಾವಿ(ಸುವರ್ಣವಿಧಾನಸೌಧ), ಡಿ.9: ರಾಜ್ಯದ ಎಲ್ಲ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಎಸ್.ಟಿ.ಪಿ.ಯನ್ನು ಕಡ್ಡಾಯವಾಗಿ ಅಳವಡಿಸುವ ನಿಬಂಧನೆಯಿದ್ದು, ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲಾ ಬಡಾವಣೆಗಳಲ್ಲಿ ಎಸ್.ಟಿ.ಪಿ. ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ಮಾರ್ಗಸೂಚಿಗಳನುಸಾರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ರಚಿಸಲಾಗುವ ಬಡಾವಣೆಗಳಲ್ಲಿನ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ನಿಯಮಗಳು, 1991 ರಲ್ಲಿನ ಅವಕಾಶಗಳಂತೆ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳುವ ಕ್ರಮದೊಂದಿಗೆ, ರೈತರ ಸಹಭಾಗಿತ್ವದೊಂದಿಗೆ ಕರ್ನಾಟಕ ನಗರಾಭಿವೃದ್ಧಿ, ಪ್ರಾಧಿಕಾರಗಳ (ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಪರಿಹಾರಗಳ ಬದಲಿಗೆ ನಿವೇಶನಗಳ ಹಂಚಿಕೆ) ನಿಯಮಗಳು, 2009 ರಲ್ಲಿನ ಅವಕಾಶದಂತೆ ವ್ಯಾಪಕವಾಗಿ ಶೇ.50:50 ರ ಅನುಪಾತದಡಿಯಲ್ಲಿ ಬಡಾವಣೆ ನಿರ್ಮಿಸಲು ಕ್ರಮವಹಿಸುತ್ತಿವೆ ಎಂದು ಬೈರತಿ ಸುರೇಶ್ ಹೇಳಿದರು.







