Belagavi | ಡಿಜಿಟಲ್ ಅರೆಸ್ಟ್; 33 ಆರೋಪಿಗಳ ಬಂಧನ

ಬೆಳಗಾವಿ : ನಗರದಲ್ಲೇ ಕುಳಿತು ಅಮೆರಿಕದ ನಾಗರಿಕರನ್ನು ‘ಡಿಜಿಟಲ್ ಅರೆಸ್ಟ್’ ಮಾಡುತ್ತಿದ್ದ ಅಂತರ್‌ರಾಷ್ಟ್ರೀಯ ಸೈಬರ್ ಅಪರಾಧ ಜಾಲವನ್ನು ನಗರದ ಪೊಲೀಸರು ಭೇದಿಸಿದ್ದಾರೆ.
ನಗರದ ಬಾಕ್ಸೈಟ್ ರಸ್ತೆಯ ಕುಮಾರ್ ಹಾಲ್‌ನಲ್ಲಿ ತೆರೆಯಲಾಗಿದ್ದ ನಕಲಿ ಅಂತರ್‌ರಾಷ್ಟ್ರೀಯ ಕಾಲ್ ಸೆಂಟರ್‌ನಿಂದ ಈ ಹಗರಣ ನಡೆಯುತ್ತಿತ್ತು. ವಿವಿಧ ರಾಜ್ಯಗಳ 33 ಆರೋಪಿಗಳನ್ನು ಬಂಧಿಸಿ, 37 ಹೈಟೆಕ್ ಲ್ಯಾಪ್‌ಟಾಪ್‌ಗಳು ಹಾಗೂ 37 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತರಲ್ಲಿ ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ನಾಗಾಲ್ಯಾಂಡ್ ರಾಜ್ಯಗಳ 32 ಮಂದಿ ಹಾಗೂ ನೇಪಾಳದ ಒಬ್ಬ ನಾಗರಿಕ ಸೇರಿದ್ದಾರೆ. ಇವರು ಬೆಳಗಾವಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅಮೆರಿಕದ ನಾಗರಿಕರನ್ನು ಮೋಸಗೊಳಿಸುತ್ತಿದ್ದರು.
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದವರಿಗೆ 18 ಸಾವಿರ ರೂ.ಯಿಂದ 45 ಸಾವಿರದವರೆಗೆ ಸಂಬಳ, ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತಿತ್ತು. ಅನುಮಾನ ವ್ಯಕ್ತಪಡಿಸಿದ ನಾಗರಿಕರೊಬ್ಬರ ಪತ್ರದ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಗರಣ ಬಯಲಾಯಿತು.
ಈ ಅಪರಾಧ ಜಾಲದ ಇಬ್ಬರು ಮಾಸ್ಟರ್‌ಮೈಂಡ್‌ಗಳು ಗುಜರಾತ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಇದ್ದು, ಅವರ ಬಂಧನ ಬಾಕಿಯಿದೆ. ಸಿಐಡಿ ಹಾಗೂ ಐಟಿ ವಿಭಾಗದ ಸಹಕಾರದಿಂದ ಮುಂದಿನ ತನಿಖೆ ನಡೆಯುತ್ತಿದೆ. ಹವಾಲಾ ಮೂಲಕ ಹಣ ವರ್ಗಾವಣೆ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣವನ್ನು ಐಟಿ ಕಾಯ್ದೆಯಅಡಿಯಲ್ಲಿ ದಾಖಲಿಸಲಾಗಿದೆ. ಇದು ಸಂಘಟಿತ ಅಂತರ್‌ರಾಷ್ಟ್ರೀಯ ಆರ್ಥಿಕ ಅಪರಾಧ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.







