ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಿಂದ ದೂರವಿರಬೇಕು : ದಿನೇಶ್ ಗುಂಡೂರಾವ್

ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಒಂದು ರಾಜಕೀಯ ಸಂಘಟನೆಯೇ ಹೊರತು ಸಾಮಾಜಿಕ ಸಂಘಟನೆಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼರಾಜ್ಯದಲ್ಲಿ ಆರೆಸ್ಸೆಸ್ ನಿಷೇಧಿಸಬೇಕಾದ ಅಗತ್ಯವಿದೆ. ಅದರ ಚಟುವಟಿಕೆಗಳಿಗೆ ಸರಕಾರಿ ಆವರಣ ಬಳಸಬಾರದು. ಸರಕಾರಿ ನೌಕರರು ಆ ಸಂಘಟನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು” ಎಂದರು.
“ಆರೆಸ್ಸೆಸ್ ನಾಯಕರು ಹಲವು ಸರಕಾರಗಳ ರಚನೆ ಮತ್ತು ಉರುಳಿಸುವ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಅದು ಸಾಮಾಜಿಕ ಸಂಘಟನೆಯಲ್ಲ, ರಾಜಕೀಯ ಸಂಘಟನೆಯಾಗಿದೆ. ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಿಂದ ದೂರವಿರಬೇಕು” ಎಂದು ಎಚ್ಚರಿಸಿದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ರಸ್ತೆ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೀಡಿದ ಟಿಪ್ಪಣಿ ಕುರಿತು ಪ್ರತಿಕ್ರಿಯಿಸಿದ ದಿನೇಶ್, “ಕಳೆದ ಏಳು ತಿಂಗಳಿನಿಂದ ಮಳೆ ಮುಂದುವರಿದಿದೆ. ರಸ್ತೆ ಅಭಿವೃದ್ಧಿಗೆ ಯುದ್ಧೋಪಾದಿಯಲ್ಲಿ ಕೆಲಸ ಪ್ರಾರಂಭಿಸಲಾಗಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ರಸ್ತೆಗಳು ಸಹಜ ಸ್ಥಿತಿಗೆ ಬರಲಿವೆ” ಎಂದು ತಿಳಿಸಿದರು.





