ಕಾಂಗ್ರೆಸ್ ಸರಕಾರ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದೆ : ಸಚಿವ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಳಗಾವಿ(ಸುವರ್ಣ ವಿಧಾನಸೌಧ) : ಸಮಸ್ಯೆಗಳು ಯಾವಾಗಲೂ ಇರುತ್ತವೆ, ಯಾವ ರೀತಿಯಲ್ಲಿ, ಹೇಗೆ, ಎಷ್ಟು ಪರಿಹಾರ ಮಾಡಲು ಪ್ರಯತ್ನ ಮಾಡಿದ್ದೇವೆ ಎನ್ನುವುದು ಮುಖ್ಯ. ಸಮಸ್ಯೆ ಬಗೆಹರಿಸುತ್ತಾರೆ ಎಂದೇ ರಾಜ್ಯದ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಕಾಂಗ್ರೆಸ್ ಸರಕಾರ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಎಲ್ಲ ಜಾತಿ ಧರ್ಮ ಹಾಗೂ ರೈತರು, ದಿನ ದಲಿತರ ಏಳಿಗೆಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯ ಸಂಸದರು, ಮುಖಂಡರು, ಕೇಂದ್ರ ಮಂತ್ರಿಗಳು ಏನು ಮಾಡುತ್ತಿದ್ದಾರೆ?. ಕೇಂದ್ರದಿಂದ ಆಗುತ್ತಿರುವ ಮಲತಾಯಿ ಧೋರಣೆ ಬಗ್ಗೆ ಮಾತೇ ಆಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮೆಕ್ಕೆಜೋಳ ಬೆಳೆದ ರೈತರ ಕುರಿತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ಬೆಂಬಲ ಬೆಲೆ ಕೊಡಿಸಲು ಪ್ರಯತ್ನವೇ ಮಾಡುತ್ತಿಲ್ಲ. ಕೇಂದ್ರ ಸರಕಾರ ಖರೀದಿಗೆ ಒಪ್ಪಿಗೆ ಕೊಡುತ್ತಿಲ್ಲ. ಖರೀದಿಸಿದರೆ ನೀವೇ ಉಪಯೋಗಿಸಿಕೊಳ್ಳಬೇಕು ಎನ್ನುತ್ತಿದೆ. ಖರೀದಿ ಮಾಡಿದರೆ ನೀವೇ ಜವಾಬ್ದಾರಿ ಎನ್ನಿತ್ತಿದೆ. ಇವುಗಳ ಕುರಿತು ಬಿಜೆಪಿ ಮಾತನ್ನೇ ಆಡುತ್ತಿಲ್ಲ. ಸರಕಾರ ಈಗ ನಮ್ಮ ಹಣದಿಂದಲೇ ಮೆಕ್ಕೆಜೋಳ ಬೆಳೆದ ರೈತರಿಗೆ ಸಹಾಯ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಉತ್ತರ ಕರ್ನಾಟಕದ ಬಗ್ಗೆ ವಿಸ್ತಾರವಾದ ಚರ್ಚೆ ಆಗಬೇಕು. ಅದನ್ನು ತಪ್ಪಿಸುವ ಹುನ್ನಾರದಿಂದ ಪ್ರತಿಪಕ್ಷ ಅವಿಶ್ವಾಸ ಮಂಡಿಸಬಹುದು. ನಮ್ಮಲ್ಲಿ ಪೂರ್ಣ ವಿಶ್ವಾಸ ಇದೆ. ಅವಿಶ್ವಾಸ ಇರುವುದು ಬಿಜೆಪಿಯಲ್ಲಿ. ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂದು ಒಂದು ಬಣ ಇದ್ದರೆ, ವಿರೋಧ ಪಕ್ಷದ ನಾಯಕನ್ನು ಬದಲಿಸಿ ಎಂದು ಇನ್ನೊಂದು ಬಣ ಸದಾ ಪ್ರಯತ್ನಿಸುತ್ತಲೇ ಇದೆ. ಇದು ಬಿಜೆಪಿ ಹಣೆಬರಹ. ನಮ್ಮಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ನುಡಿದರು.







