‘ಜೈ ಬಾಪು ಸಮಾವೇಶ’ ಯಶಸ್ವಿಗೊಳಿಸಲು ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ಬೆಳಗಾವಿ : ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ತಯಾರಿ ನಡೆಯುತ್ತಿದ್ದು, ಎಲ್ಲ ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಆಹಾರ ಸಮಿತಿ ಜವಾಬ್ದಾರಿ ಹೊತ್ತಿರುವ ಸಚಿವ ಕೆ.ಎಚ್.ಮುನಿಯಪ್ಪ, ವಸತಿ ಸಮಿತಿ ಮುಖ್ಯಸ್ಥ ಡಾ.ಸುಧಾಕರ್ ಬೆಳಗಾವಿಗೆ ಆಗಮಿಸಿದ್ದು, ಸ್ವಾಗತ ಸಮಿತಿ ಮುಖ್ಯಸ್ಥ ಡಾ.ಜಿ.ಪರಮೇಶ್ವರ್ ಶೀಘ್ರದಲ್ಲೇ ಆಗಮಿಸಲಿದ್ದಾರೆ. ನಾವು ಯಾರಿಗೆಲ್ಲ ಜವಾಬ್ದಾರಿ ವಹಿಸಿದ್ದೇವೋ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.
ಜ.21ರ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ನಂತರ ಔತಣಕೂಟ ಏರ್ಪಡಿಸಲಾಗಿದೆ. ಅನಂತರ ಸಮಾವೇಶ ನಡೆಯಲಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಸಮಾವೇಶಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿದ್ದೇವೆ. ಯಾರು ಬೇಕಾದರೂ ಬರಬಹುದು. ಇಂತಿಷ್ಟೇ ಜನ ಬರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಈ ಸಮಾವೇಶ ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರ. ಹೀಗಾಗಿ ಇದು ಎಲ್ಲರ ಕಾರ್ಯಕ್ರಮ. ಬಿಜೆಪಿಯವರು ಹೊರತಾಗಿ ಈ ದೇಶ ಉಳಿಸಲು, ಸಂವಿಧಾನ ರಕ್ಷಿಸಲು, ಗಾಂಧೀಜಿ ಅವರ ಆಚಾರ ವಿಚಾರ ಪ್ರಚಾರ ಮಾಡುವ ಇಚ್ಛೆ ಇರುವ ಯಾರು ಬೇಕಾದರೂ ಸಮಾವೇಶಕ್ಕೆ ಆಗಮಿಸಬಹುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಶೆಟ್ಟರ್ ಬಂದರೆ ಬೆಳಗಾವಿ ಸುತ್ತಾಡಿಸುವೆ: ‘ಕಾಂಗ್ರೆಸ್‍ನವರು ಸರಕಾರದ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಗಾಂಧಿ ಫೋಟೋ ಹಾಕದೇ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದಾರೆ’ ಎಂಬ ಸಂಸದ ಜಗದೀಶ್ ಶೆಟ್ಟರ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಶೆಟ್ಟರ್ ಅವರು ಬಂದರೆ ಅವರನ್ನು ಬೆಳಗಾವಿ ಪ್ರವಾಸ ಮಾಡಿಸುತ್ತೇನೆ. ಬೆಳಗಾವಿ ತುಂಬೆಲ್ಲಾ ಸುತ್ತಾಡಿಸಿ ನಾವು ಎಲ್ಲೆಲ್ಲಿ ಏನು ಮಾಡಿದ್ದೇವೆ ಎನ್ನುವುದನ್ನು ಅವರಿಗೆ ತೋರಿಸುತ್ತೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಆಡಿದ ನುಡಿಮುತ್ತುಗಳನ್ನು ನೋಡಲಿ’ ಎಂದು ತಿರುಗೇಟು ಕೊಟ್ಟರು.







