ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ : ಡಿ.ಕೆ.ಶಿವಕುಮಾರ್

ಬೆಳಗಾವಿ : ಪ್ರತ್ಯೇಕವಾದ ಸಮಿತಿಯೊಂದನ್ನು ರಚಿಸಿ, ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅವರಿಗೆ ಸಹಾಯಹಸ್ತ ಕಲ್ಪಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ವಸತಿ ಹಾಗೂ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪುನರ್ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ನಿಯಮ 330ರ ಮೇರೆಗೆ ಬಿಜೆಪಿ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಹಾಗೂ ಪಿ.ಎಚ್. ಪೂಜಾರ್ ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ರಾಜ್ಯ ಸರಕಾರವು ಸಂತ್ರಸ್ಥರ ನೆರವಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆಯ ಪ್ರದೇಶದ ಸಂತ್ರಸ್ತರಿಗೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಇಲ್ಲಿವರೆಗೆ ಈ ಭಾಗದಲ್ಲಿ ಶೇ.50ರಷ್ಟು ಮಾತ್ರ ನೀರಾವರಿಯಾಗಿದ್ದು, ಇದುವರೆಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಆಗಿರುವುದಿಲ್ಲ. ಇದುವರೆಗೆ 146 ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳು ಸರಿಯಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂದು ನೋಡಿಲ್ಲ. ಇನ್ನೂ 20 ವರ್ಷಗಳ ಕಳೆದರೆ ಅಲ್ಲಿನ ಜನ ಘೇರಾವು ಹಾಕುವ ಪರಿಸ್ಥಿತಿ ಬರಬಹುದು. ಅಣೆಕಟ್ಟು ವಿಸ್ತರಣೆಯಿಂದಾಗಿ ಬಾಧಿತವಾದ ಗ್ರಾಮಗಳಲ್ಲಿನ ಸಂತ್ರಸ್ಥರ ಪರಿಸ್ಥಿತಿ ಸರಿ ಇಲ್ಲ ಎಂದು ಸದಸ್ಯ ಪಿ.ಎಚ್.ಪೂಜಾರ ಹಾಗೂ ನಿರಾಣಿ ಹನುಮಂತ ರುದ್ರಪ್ಪ ಸದನದಲ್ಲಿ ನೋವು ವ್ಯಕ್ತಪಡಿಸಿದರು.







