ಕಾರ್ಖಾನೆಗಳಿಗೆ ಹೊರೆಯಾದರೂ ರೈತರ ಹಿತಕ್ಕಾಗಿ ಸ್ಪಷ್ಟ ತೀರ್ಮಾನ ಕೈಗೊಳ್ಳಿ : ಡಿ.ಕೆ.ಶಿವಕುಮಾರ್
ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ರಕ್ಷಣೆ ಸರಕಾರದ ಜವಾಬ್ದಾರಿ; ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಕರೆ

ಬೆಳಗಾವಿ : ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಹೊರೆಯಾಗಿದ್ದರೂ ರೈತರ ಹಿತದೃಷ್ಟಿಯಿಂದ ಕಬ್ಬಿನ ಬೆಲೆ ವಿಚಾರದಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚನೆ ನೀಡಿದರು.
ನಗರದ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಮಿತಿಯ ಪ್ರಗತಿ ಕುರಿತು ಸಂಸದರು ಮಾಹಿತಿ ನೀಡಿದ್ದಾರೆ. ಎಥನಾಲ್ ಮತ್ತು ಮೊಲ್ಯಾಸಿಸ್ ವಿಚಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದರಿಂದ ಪ್ರಯೋಜನವಿಲ್ಲ. ರೈತರೊಂದಿಗೆ ಚರ್ಚಿಸಿ, ಅವರ ಬಗ್ಗೆ ಹೃದಯವಂತಿಕೆ ತೋರಬೇಕು. ಕಾರ್ಖಾನೆ ಮಾಲೀಕರು ಮತ್ತು ರೈತರು ಒಟ್ಟಾಗಿ ಕುಳಿತು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಕಳೆದ ವರ್ಷ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದಂತಹ ಘಟನೆಗಳು ಮರುಕಳಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಈ ಹಿಂದೆ ಕೆಲವು ತೀರ್ಮಾನಗಳನ್ನು ಕೈಗೊಂಡಿತ್ತು. ಸರ್ಕಾರದ ವತಿಯಿಂದ ಒಂದು ಭಾಗದ ಹಣ ನೀಡುವುದು ಹಾಗೂ ಉಳಿದ ಮೊತ್ತವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಭರಿಸುವ ಬಗ್ಗೆ ನಿರ್ಧಾರವಾಗಿತ್ತು. ಶೇ 80ರಷ್ಟು ಕಾರ್ಖಾನೆಗಳು ಈ ತೀರ್ಮಾನವನ್ನು ಪಾಲಿಸಿವೆ. ಕೆಲವು ಕಾರ್ಖಾನೆಗಳು ಪಾಲಿಸದೆ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಕಬ್ಬಿನ ಬೆಲೆ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳಿವೆ. ಸಕ್ಕರೆ ಕಾರ್ಖಾನೆಗಳು ಹಣಕಾಸು, ಬ್ಯಾಂಕ್ ಸಾಲ, ಎಥನಾಲ್ ಉತ್ಪಾದನೆ ಮತ್ತು ವಿದ್ಯುತ್ ದರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಸಂಘರ್ಷದ ಬದಲಾಗಿ ಸೌಹಾರ್ದಯುತ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ವಾರ್ಷಿಕ 20,000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ಈ ವರ್ಷ 32,000 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜಿದೆ. ಮಳೆ ಕೊರತೆಯಿಂದ ರೈತರು ಹೆಚ್ಚು ವಿದ್ಯುತ್ ಬಳಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಸರ್ಕಾರ ಯಾವುದೇ ಒಂದು ವರ್ಗದ ಪರವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ; ರೈತರಿಲ್ಲದಿದ್ದರೆ ಕಾರ್ಖಾನೆಗಳಿಗೂ ಅಸ್ತಿತ್ವದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಎರಡೂ ವರ್ಗಗಳ ಹಿತ ಕಾಪಾಡುವುದು ಅಗತ್ಯ ಎಂದು ಡಿ.ಕೆ. ಶಿವಕುಮಾರ ಹೇಳಿದರು.
ಸಕ್ಕರೆ ಉತ್ಪಾದನೆ ಕುಸಿದಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಅಂಶಗಳು ಉದ್ಯಮದ ಮೇಲೆ ಪರಿಣಾಮ ಬೀರುತ್ತಿವೆ. ರೈತರ ಬದುಕು ಮತ್ತು ಸಕ್ಕರೆ ಕಾರ್ಖಾನೆಗಳ ಸುಸ್ಥಿರತೆ ಎರಡೂ ಸರ್ಕಾರಕ್ಕೆ ಮುಖ್ಯವಾಗಿವೆ. ಈ ಸಮಸ್ಯೆ ಪರಿಹರಿಸುವ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿಯವರೊಂದಿಗೂ ಚರ್ಚಿಸಿದ್ದು, ಅವರೂ ಸಮಸ್ಯೆ ಬಗೆಹರಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಪರಸ್ಪರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಬೇಕು. ಎಲ್ಲರಿಗೂ ಸ್ವೀಕಾರಾರ್ಹವಾದ ನಿರ್ಧಾರ ಕೈಗೊಳ್ಳುವ ಮೂಲಕ ಕಬ್ಬಿನ ಬೆಲೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.






