Belagavi | ಶಿವಾನಂದ್ ನೀಲಣ್ಣವರ್ಗೆ ED ಶಾಕ್; ಬೆಳಗಾವಿ ಸೇರಿ ಹಲವು ಕಡೆ ಏಕಕಾಲದಲ್ಲಿ ದಾಳಿ

ಬೆಳಗಾವಿ : ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನೀಲಣ್ಣವರ್ ಗೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಬಿಗ್ ಶಾಕ್ ನೀಡಿದೆ. ಬೆಳಗಾವಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಈಡಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಶಿವಬಸವ ನಗರದ ಅಪಾರ್ಟ್‌ಮೆಂಟ್‌ನಲ್ಲಿರುವ ಶಿವಾನಂದ ನೀಲಣ್ಣವರ್ ನಿವಾಸದ ಮೇಲೆ ಈಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಈಗಾಗಲೇ ಬಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿರುವ ನಡುವೆಯೇ ಇಡಿಯ ಈ ದಾಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ದಾಳಿಯ ವೇಳೆ ಶಿವಾನಂದ ನೀಲಣ್ಣವರ್ ಪತ್ನಿ ಸಂಗೀತಾ ಹಾಗೂ ಅಳಿಯ ಸಂಜು ಅವರನ್ನು ಈಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಮಂಗಳೂರು ಹಾಗೂ ಗೋವಾ ಘಟಕದ ಈಡಿ ಅಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮನೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದೆ.
ಇದೇ ವೇಳೆ ಶಿವಾನಂದ ನೀಲಣ್ಣವರ್ ಆಪ್ತರ ನಿವಾಸಗಳ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸ ಹಾಗೂ ಚಿಕ್ಕೋಡಿಯಲ್ಲಿರುವ ಸುಭಾಷ್ ಎಂಬವರ ಮನೆಯಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ 15ರಂದು ಬೆಳಗಾವಿ ಎಸಿಪಿ ನೇತೃತ್ವದಲ್ಲಿ ಮೊದಲ ಹಂತದ ದಾಳಿ ನಡೆದಿತ್ತು. ಬಳಿಕ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಸಿಐಡಿ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಇದೀಗ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.






